ಬೆಂಗಳೂರು, (ಮಾ.16): ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ದಿಢೀರ್ ಜೆಡಿಎಸ್​ಗೆ ಗುಡ್ ಬೈ ಹೇಳಿ ಬಿಎಸ್​ಪಿ ಸೇರಿದ್ದಾರೆ. ದಶಕಗಳಿಂದ ಜೆಡಿಎಸ್​ ಪಕ್ಷದಲ್ಲಿ ಸಕ್ರಿಯರಾಗಿದ್ದರೂ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬ ಬೇಸರ ಅವರಲ್ಲಿತ್ತು ಎನ್ನಲಾಗಿದೆ.

ಇದೇ ಕಾರಣಕ್ಕೀಗ ಪಕ್ಷ ತೊರೆದು ಮಾಯಾವತಿಯವರ ಬಿಎಸ್​ಪಿ ಪಕ್ಷದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್- ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಂಚಾಲಕರೂ ಆಗಿದ್ದ ಡ್ಯಾನಿಶ್, ದೇವೇಗೌಡರ ಪರಮಾಪ್ತ ಕೂಡಾ ಆಗಿದ್ದರು. 

ಆದ್ರೆ ಕುಮಾರಸ್ವಾಮಿ ಅವರ ಟ್ವೀಟ್ ಮಾಡಿರುವುದನ್ನು ಗಮನಿಸಿದ್ರೆ ದೇವೇಗೌಡ್ರ ಸಮ್ಮತಿ ಮೇರೆಗೆ ಡ್ಯಾನಿಶ್ ಬಿಎಸ್‌ಪಿ ಸೇರಿದ್ದಾರೆ ಎನ್ನುವ ಅರ್ಥ ಕಲ್ಪಿಸುತ್ತಿದೆ.

'ಡ್ಯಾನಿಶ್​​ ಅಲಿ ಬಿಎಸ್​ಪಿ ಸೇರ್ಪಡೆಯಾಗಿದ್ದಾರೆ. ಬಿಎಸ್​ಪಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದರೆ ಡ್ಯಾನಿಶ್​​ ಅಲಿ ಗೆಲುವು ಸಾಧಿಸಬಹುದು.

ಅದರ ಜತೆಗೆ ಬಿಎಸ್​ಪಿ ಮತ್ತು ಜೆಡಿಎಸ್​ ಪಕ್ಷಗಳ ನಡುವಿನ ಬಾಂಧವ್ಯವೂ ಬೆಳೆಯಲಿದೆ' ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಆದ್ರೆ ಇದು ರಾಷ್ಟ್ರ ರಾಜಕಾರಣದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.