ರೇವಣ್ಣ ತಲೆಹಾಕದಿದ್ದರೆ ನಿಖಿಲ್ ಗೆಲುವು ನಿಶ್ಚಿತ: ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ ಗೆಲುವಿನ ಬಗ್ಗೆ ಕುಮಾರಸ್ವಾಮಿ ಭರವಸೆ | ರೇವಣ್ಣ, ತಮ್ಮಣ್ಣ ಹೇಳಿಕೆಗೆ ಸಿಎಂ ಅಸಮಾಧಾನ | ರೇವಣ್ಣ ಮೂಗು ತೂರಿಸಬಾರದೆಂದು ಹೇಳಿದ್ದಾರೆ.
ಬೆಂಗಳೂರು (ಮಾ. 12): ಹಾಸನದಲ್ಲಿ ಪ್ರಜ್ವಲ್, ಮಂಡ್ಯದಲ್ಲಿ ನಿಖಿಲ್ ನಿಲ್ಲಿಸುವುದರಿಂದ ಒಕ್ಕಲಿಗ ಮತದಾರರಲ್ಲಿಯೇ ಸ್ವಲ್ಪ ಕೆಟ್ಟ ಹೆಸರು ಬರುವುದು ಸ್ವಾಭಾವಿಕ. ಆದರೆ ಮಂಡ್ಯದಲ್ಲಿ ಸುಮಲತಾ ನಿಂತಾಗ ಎದುರಿಸಿ ನಿಂತು ಗೆಲ್ಲಲು ದೇವೇಗೌಡರ ಕುಟುಂಬದ ಕುಡಿಯೇ ಆಗಬೇಕು, ಇಲ್ಲವಾದರೆ ಕಷ್ಟ ಎಂದು ಹೇಳಿದ್ದು ಬೇರಾರೂ ಅಲ್ಲ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ.
ಯೋಗೇಶ್ವರ್ ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ?
ಸುಮಲತಾ ವಿಷಯದ ಬಗ್ಗೆ ಕ್ಯಾಮೆರಾ ಇಲ್ಲದೆ ಪತ್ರಕರ್ತರು ಮುತ್ತಿಕೊಂಡಾಗ ಮನಸ್ಸು ಬಿಚ್ಚಿ ಮಾತನಾಡಿದ ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಯಾರೂ ಕೂಡ ತಲೆಹಾಕದೆ ನನಗೆ ಒಬ್ಬನಿಗೇ ಬಿಟ್ಟರೆ ಆರಾಮಾಗಿ ನಿಖಿಲ್‌ನನ್ನು ಗೆಲ್ಲಿಸುತ್ತೇನೆ. ಆದರೆ ನಮ್ಮ ರೇವಣ್ಣ, ತಮ್ಮಣ್ಣ ಇಂಥ ಹೇಳಿಕೆ ಕೊಡಬಾರದು ಎಂದು ತಲೆ ಚಚ್ಚಿಕೊಂಡರು.
ಆಗ ಒಬ್ಬ ಪತ್ರಕರ್ತ, ‘ಕರ್ನಾಟಕ ಭವನದ ಪೂಜೆ ಮಾಡಲು ನೀವು ರೇವಣ್ಣನನ್ನು ಮುಂದೆ ಕಳಿಸಿದ್ರಿ. ಅವರು ನೋಡಿದ್ರೆ ಟೀವಿಯಲ್ಲಿ ಪ್ರಸಾದ ಹಂಚಿಯೇ ಬಿಟ್ಟಿದ್ದಾರೆ’ ಎಂದಾಗ ರೇವಣ್ಣ ಸಹಿತವಾಗಿ ಕುಮಾರಸ್ವಾಮಿ ಬಿದ್ದೂಬಿದ್ದು ನಕ್ಕರು. ಆಗ ರೇವಣ್ಣ, ‘ಅಯ್ಯೋ ಬಿಡಿ ಬ್ರದರ್, ಇಂಥದ್ದು ಮಾತನಾಡಲಿಲ್ಲ ಅಂದರೆ ನೀವೆಲ್ಲ ಪಬ್ಲಿಸಿಟಿ ಕೊಡುತ್ತೀರಾ? ಈಗ ಒಳ್ಳೆ ಪ್ರಚಾರ ಕೊಟ್ಟಿದ್ದೀರಿ’ ಎನ್ನುತ್ತಿದ್ದರು.
ಅಲ್ಲಿಗೆ ಮಾತು ನಿಲ್ಲಿಸದ ಕುಮಾರಸ್ವಾಮಿ, ಅಂಬರೀಷ್ ತೀರಿಕೊಂಡಾಗ ರಾತ್ರಿ 12 ಗಂಟೆಗೆ ನಾನು ಆಸ್ಪತ್ರೆಗೆ ಓಡಿದೆ. ಅಲ್ಲಿ ನಿಂತಿದ್ದ ಒಬ್ಬ ಅಭಿಮಾನಿ, ಅಣ್ಣನನ್ನು ಮಂಡ್ಯಕ್ಕೆ ಕರೆದುಕೊಂಡು ಬರಬೇಕು ಎಂದು ಕೂಗಿದಾಗ ಸುಮಲತಾ ಮೇಡಂ, ‘ಬೇಡ ಸಾಧ್ಯವೇ ಇಲ್ಲ, ಅಲ್ಲಿ ಹೋದರೆ ಅಲ್ಲಿಯೇ ಸಂಸ್ಕಾರ ಆಗಬೇಕು ಎಂದು ಜನ ಪಟ್ಟು ಹಿಡಿಯುತ್ತಾರೆ’ ಎಂದರು.
ಕಟ್ಟಾ-ಅಶೋಕ್ ನಡುವೆ ಮುಸುಕಿನ ಗುದ್ದಾಟ!
ನಾನು ನಿರ್ಮಲಾ ಸೀತಾರಾಮನ್ ಜೊತೆ ಮಾತನಾಡಿ ವ್ಯವಸ್ಥೆ ಮಾಡಿದೆ. ಈಗ ನೋಡಿದರೆ ನಾನೇ ವಿಲನ್. ಸುಮಲತಾ ಮೇಡಂ ಮಂಡ್ಯದ ಗೌಡ್ತಿ ಅನ್ನುವ ರೀತಿಯಲ್ಲಿ ಬಿಂಬಿಸುತ್ತೀರಲ್ಲ ಬ್ರದರ್. ಸೋಷಿಯಲ್ ಮೀಡಿಯಾ ಬಿಡಿ, ಮಂಡ್ಯದ ಜನ ನಮ್ಮ ಕುಟುಂಬದ ಜೊತೆ ಇದ್ದಾರೆ ಎಂದರು.
ರೇವಣ್ಣ ಮಾಡಿದ ಎಡವಟ್ಟು
ರೇವಣ್ಣರನ್ನು ದಿಲ್ಲಿ ಪತ್ರಕರ್ತರು ಪುಸಲಾಯಿಸಿ, ಕೆರಳಿಸಿ ಸುಮಲತಾ ಬಗ್ಗೆ ಮಾತನಾಡಿಸಿದರು ಎಂದು ದಿಲ್ಲಿಯಿಂದ ಬೆಂಗಳೂರಿಗೆ ಹೋಗಿ ಕುಮಾರಸ್ವಾಮಿ ಹೇಳಿದರೂ ಕೂಡ ಇಲ್ಲಿ ಆಗಿದ್ದೇ ಬೇರೆ. ಸುವರ್ಣ ನ್ಯೂಸ್‌ನಲ್ಲಿ ನಿಖಿಲ್ ಬಗ್ಗೆ ಕೇಳಿದ ಸಿಂಪಲ್ ಪ್ರಶ್ನೆಗೆ ತಾನೇ ಕೆರಳಿ ಮಾತನಾಡಿದ ರೇವಣ್ಣ ಕೀಳು ಹೇಳಿಕೆ ನೀಡಿದರು. ಅದನ್ನು ನೋಡಿ ಇನ್ನೊಂದು ಚಾನಲ್‌ನ ಪತ್ರಕರ್ತೆ ಹೋಗಿ ಮೈಕ್ ಹಿಡಿದಾಗ, ಮಂಡ್ಯ ಹೆಸರು ಹೇಳಿದ ತಕ್ಷಣವೇ ರೇವಣ್ಣ ಸುವರ್ಣನ್ಯೂಸ್‌ಗೆ ಹೇಳಿದ್ದನ್ನೇ ಹೇಳಿದರು. ಆದರೆ ತಪ್ಪು ರಿಪೇರಿ ಆಗದಷ್ಟು ದೊಡ್ಡದಾದಾಗ ರಾಜಕಾರಣಿಗಳಿಗೆ ಸುಲಭವಾಗಿ ಕಾಣುವುದು ಪತ್ರಕರ್ತರೇ ಬಿಡಿ.
- ಪ್ರಶಾಂತ್, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ರಾಜಕಾರಣದ ಸುದ್ದಿಗಾಗಿ ’ಇಂಡಿಯಾ ಗೇಟ್’ ಕ್ಲಿಕ್ ಮಾಡಿ