Asianet Suvarna News Asianet Suvarna News

ಮತ ಹಾಕಿದವರಿಗೆ ಭರ್ಜರಿ ಆಫರ್!: ಮದ್ಯ, ಪೆಟ್ರೋಲ್‌, ಹೋಟೆಲ್‌ ತಿನಿಸಿನಲ್ಲಿ ಡಿಸ್ಕೌಂಟ್‌

ಮತ ಹಾಕಿದವರಿಗೆ ಭರ್ಜರಿ ಆಫರ್‌| ಮದ್ಯ, ಪೆಟ್ರೋಲ್‌, ಹೋಟೆಲ್‌ ತಿನಿಸಿನಲ್ಲಿ ಡಿಸ್ಕೌಂಟ್‌| ವ್ಯಾಪಾರಿಗಳು, ಸಾರ್ವಜನಿಕರಿಂದ ಹಲವು ಕೊಡುಗೆ

cast Your Vote And Get Excited Gifts
Author
Bangalore, First Published Apr 23, 2019, 7:59 AM IST

 ಬೆಂಗಳೂರು[ಏ.23]: ರಾಜ್ಯದಲ್ಲಿ ಎರಡನೇ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ಖಾಸಗಿ ಸಂಘ ಸಂಸ್ಥೆಗಳು, ಉದ್ಯಮಿಗಳು, ವ್ಯಾಪಾರಸ್ಥರು, ಸಮಾಜ ಸೇವಕರು ವಿವಿಧ ಆಫರ್‌ಗಳನ್ನು ಮತದಾರರಿಗೆ ನೀಡಿದ್ದಾರೆ.

ವೋಟ್‌ ನಿಮ್ದು ಎಣ್ಣೆ ನಮ್ದು!

ಹುಬ್ಬಳ್ಳಿಯ ಪ್ರಸಿದ್ಧ ಕ್ಲಬ್‌ ರಸ್ತೆಯಲ್ಲಿರುವ ಕರ್ನಾಟಕ ವೈನ್‌ ಸ್ಟೋರ್‌ನವರು ಮತದಾನ ಮಾಡುವ ಮದ್ಯಪ್ರಿಯರಿಗೆ ವಿನೂತನವಾದ ಆಫರ್‌ ನೀಡಿದ್ದಾರೆ. ಮತದಾನ ಮಾಡಿದವರಿಗೆ ಮದ್ಯದಲ್ಲಿ ಶೇ.3ರಷ್ಟುರಿಯಾಯಿತಿ ಪ್ರಕಟಿಸಿದ್ದಾರೆ. ಕೈಬೆರಳಿನ ಶಾಯಿ ತೋರಿಸಿ ಈ ಆಫರ್‌ ಪಡೆಯಬಹುದು. ಮತದಾನದ ದಿನ ಮದ್ಯ ಮಾರಾಟ ಇರುವುದಿಲ್ಲ. ಹೀಗಾಗಿ ಮತದಾರರು ಮರುದಿನವಾದ ಏ.24ರಂದು ಈ ಆಫರ್‌ ಪಡೆಯಬಹುದು ಎಂದು ಮದ್ಯದಂಗಡಿ ಮಾಲೀನ ವಿನಾಯಕ ಆಕಳವಾಡಿ ತಿಳಿಸಿದ್ದಾರೆ.

ಪೆಟ್ರೋಲ್‌ 1 ರು. ರಿಯಾಯಿತಿ

ಹಾವೇರಿಯ ಕಾಗಿನೆಲೆ ರಸ್ತೆಯ ಇಂಡಿಯನ್‌ ಆಯಿಲ್‌ ಶಿಮುಶ ಪೆಟ್ರೋಲ್‌ ಬಂಕ್‌ನಲ್ಲಿ ಮತದಾನ ಮಾಡುವ ಗ್ರಾಹಕರಿಗೆ ಪ್ರತಿ ಲೀಟರ್‌ ಪೆಟ್ರೋಲ್‌ಗೆ 1 ರು. ರಿಯಾಯಿತಿ ನೀಡುವುದಾಗಿ ಬಂಕ್‌ ಮಾಲೀಕರು ತಿಳಿಸಿದ್ದಾರೆ. ಮಂಗಳವಾರ ಮುಂಜಾನೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಈ ರಿಯಾಯಿತಿ ಲಭಿಸಲಿದೆ. ವೋಟ್‌ ಮಾಡಿದವರು ಬೆರಳಿನ ಶಾಯಿ ತೋರಿಸಿದರೆ ರಿಯಾಯಿತಿಯಲ್ಲಿ ಪೆಟ್ರೋಲ್‌ ಪಡೆಯಬಹುದು.

ಚಾಟ್ಸ್‌ ಮೇಲೆ ಶೇ.10 ಡಿಸ್ಕೌಂಟ್‌

ಹುಬ್ಬಳ್ಳಿಯ ಚೆಟ್ಟಿಸ್‌ ಕಾರ್ನರ್‌ ಎಂಬ ಚಾಟ್‌ ಸೆಂಟರ್‌ನವರು ಮತದಾನ ಮಾಡಿ ಬಂದವರಿಗೆ ಬಿಲ್‌ನಲ್ಲಿ ಶೇ.10ರಷ್ಟುರಿಯಾಯಿತಿ ನೀಡುವುದಾಗಿ ಘೋಷಿಸಿದ್ದಾರೆ. ಏಳು ದಿನಗಳವರೆಗೆ ಈ ರಿಯಾಯಿತಿ ಇರುತ್ತದೆ. ಏಳು ದಿನಗಳಲ್ಲಿ ಯಾವಾಗಾದರೂ ಒಮ್ಮೆ ಇದರ ಲಾಭ ಪಡೆಯಬಹುದು.

1 ವಾರ ಉಚಿತ ಯೋಗ ತರಬೇತಿ

ಶಿವಮೊಗ್ಗದಲ್ಲಿ ಮತದಾನವನ್ನು ಪ್ರೋತ್ಸಾಹಿಸಲು ಗೋಪಿ ವೃತ್ತದ ಮಕ್ಕಳ ವಿದ್ಯಾ ಸಂಸ್ಥೆಯಲ್ಲಿರುವ ಶ್ರೀ ರಾಘವೇಂದ್ರ ಯೋಗ ಕೇಂದ್ರದ ಯೋಗ ತಜ್ಞ ಗೋಪಾಲಕೃಷ್ಣ ಅವರು ಮತದಾನ ಮಾಡಿದವರಿಗೆ ಒಂದು ವಾರ ಉಚಿತವಾಗಿ ಯೋಗ ತರಬೇತಿ ನೀಡುವುದಾಗಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ. 94484 14849ರಲ್ಲಿ ಸಂಪರ್ಕಿಸಲು ಕೋರಿದ್ದಾರೆ.

ಹೇರ್‌ ಕಟಿಂಗ್‌ ಉಚಿತ

ಹಾವೇರಿ ನಗರದ ಹೊಸ್ಮನಿ ಸಿದ್ದಪ್ಪ ವೃತ್ತದಲ್ಲಿರುವ ಮಾಲತೇಶ ಮೆನ್ಸ್‌ ಪಾರ್ಲರ್‌ ಮಾಲೀಕ ಮಾಲತೇಶ ಹಡಪದ ಅವರು ಮತದಾನ ಮಾಡುವವರಿಗೆ ಉಚಿತ ಹೇರ್‌ ಕಟಿಂಗ್‌ ಕೊಡುಗೆ ಘೋಷಿಸಿದ್ದಾರೆ. ಏ.23ರಂದು ವೋಟ್‌ ಹಾಕಿ ಶಾಯಿ ಗುರುತು ತೋರಿಸಿದರೆ ಉಚಿತವಾಗಿ ಕಟಿಂಗ್‌ ಮಾಡುವುದಾಗಿ ಮಾಲತೇಶ ಹಡಪದ ತಿಳಿಸಿದ್ದಾರೆ. ಮಂಗಳವಾರದಿಂದ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಸಲೂನ್‌ ತೆರೆದಿರಲಿದ್ದು, ಅಷ್ಟರೊಳಗೆ ಮತ ಚಲಾಯಿಸಿ ಬಂದವರಿಗೆ ಈ ಸೌಲಭ್ಯ ಸಿಗಲಿದೆ ಎಂದು ತಿಳಿಸಿದ್ದಾರೆ.

ಉಚಿತ ಮಜ್ಜಿಗೆ ವಿತರಣೆ

ಮತದಾನ ಮಾಡಿ ಬರುವವರಿಗೆ ಉಚಿತವಾಗಿ ಮಜ್ಜಿಗೆ ವಿತರಣೆ ಮಾಡಲು ಬಳ್ಳಾರಿ ನಗರದ ಜಾನಪದ ಕಲಾವಿದ ಯಲ್ಲನಗೌಡ ಶಂಕರಬಂಡೆ ಮುಂದಾಗಿದ್ದಾರೆ. ಬಳ್ಳಾರಿ ಪಾರ್ವತಿ ನಗರದ ಎರಡನೇ ಮುಖ್ಯರಸ್ತೆಯ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಕೇಂದ್ರವಿದ್ದು, ಇಲ್ಲಿಗೆ ಮತದಾನ ಮಾಡಲು ಬರುವ ಎಲ್ಲ ಮತದಾರರಿಗೆ ಪಾರ್ವತಿ ನಗರ ಉದ್ಯಾನವನ ಎದುರು ಉಚಿತವಾಗಿ ಮಜ್ಜಿಗೆ ವಿತರಣೆ ಮಾಡಲಾಗುವುದು ಎಂದು ಯಲ್ಲನಗೌಡ ಶಂಕರಬಂಡೆ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ವೋಟು ಹಾಕಿ ಪುಗಸಟ್ಟೆಫೋಟೋ ತೆಗೆಸಿಕೊಳ್ಳಿ

ಬೆಳಗಾವಿಯಲ್ಲಿ ಮತದಾನ ಮಾಡಿದವರಿಗೆ ಉಚಿತವಾಗಿ ಭಾವಚಿತ್ರ ತೆಗೆದುಕೊಡುವುದಾಗಿ ಫೋಟೋಗ್ರಾಫರ್‌ ರವಿ ಹೊಂಗಲ ತಿಳಿಸಿದ್ದಾರೆ. ಬೆಳಗಾವಿಯ ಎಸ್‌ಪಿಎಂ ರಸ್ತೆಯ ಕಪಲೇಶ್ವರ ಮಂದಿರ ಹತ್ತಿರವಿರುವ ರಾಣಿ ಡಿಜಿಟಲ್‌ ಸ್ಟುಡಿಯೋದಲ್ಲಿ ಅವರ ಫೋಟೋ ಸ್ಟುಡಿಯೋ ಇದೆ. ಮತ ಚಲಾಯಿಸಿದವರು ಈ ಸ್ಟುಡಿಯೋಕ್ಕೆ ಹೋಗಿ ಮತ ಮಾಡಿದ ಗುರುತು ತೋರಿಸಿ ಫೋಟೋ ತೆಗೆಸಿಕೊಳ್ಳಬಹುದು.

ಹೋಟೆಲ್‌ನಿಂದ ಶೇ.50 ರಿಯಾಯಿತಿ

ದಾವಣಗೆರೆ ನಗ​ರದ ಕೆಎ​ಸ್ಸಾ​ರ್ಟಿಸಿ ಬಸ್‌ ನಿಲ್ದಾಣ ಎದು​ರಿನ ಭರತ್‌ ಹೋಟೆ​ಲ್‌ನ ಬಿ.ಜೆ. ಅಜ​ಯ​ ಕು​ಮಾರ್‌ ತಮ್ಮ ಹೋಟೆ​ಲ್‌​ನಲ್ಲಿ ಮತ ಚಲಾ​ಯಿಸಿ ಬಂದ​ವ​ರಿಗೆ ಶೇ.50 ರಿಯಾ​ಯಿತಿ ಘೋಷಣೆ ಮಾಡಿ​ದ್ದಾರೆ. ವೋಟ್‌ ಮಾಡಿದವರು ಬೆರಳಿನ ಶಾಯಿ ತೋರಿಸಿದರೆ ಊಟ, ತಿಂಡಿಯನ್ನು ರಿಯಾಯಿತಿಯಲ್ಲಿ ವಿತರಿಸಲಾಗುತ್ತದೆ.

ವಿವಿಧೆಡೆ ಉಚಿತ ಆರೋಗ್ಯ ತಪಾಸಣೆ

ಕೊಪ್ಪಳ ನಗರದ ಕೆ.ಎಸ್‌.ಆಸ್ಪತ್ರೆ ಉಚಿತ ಆರೋಗ್ಯ ತಪಾಸಣೆ ಸೌಲಭ್ಯ ಕಲ್ಪಿಸಿದೆ. ಚುನಾವಣೆ ದಿನ ಹಾಗೂ ಮಾರನೇ ದಿನ ಈ ಸೌಲಭ್ಯವಿದೆ. 23 ರಂದು ಪೂರ್ತಿ ದಿನ, 24 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಈ ಸೌಲಭ್ಯವಿರುತ್ತದೆ. ಹಾವೇರಿ ನಗರದ ಅಮರಕೃಪ ಆಯುರ್ವೇದ ಆಸ್ಪತ್ರೆಯು ಏ.23 ರಿಂದ 29ರವರೆಗೆ ಉಚಿತ ವೈದ್ಯಕೀಯ ತಪಾಸಣೆ ಆಫರ್‌ ಘೋಷಿಸಿದೆ. ಬೆಳಗಾವಿ ನಗರದ ಮೂರನೇ ರೈಲ್ವೆ ಗೇಟ್‌ ಬಳಿ ಇರುವ ವೇಣುಗ್ರಾಮ ಆಸ್ಪತ್ರೆ, ಕುಲಕರ್ಣಿ ಗಲ್ಲಿಯಲ್ಲಿರುವ ಖೇಮಲಾಪೂರೆ ಆಸ್ಪತ್ರೆಯಲ್ಲಿ ಶೇ.15 ರಷ್ಟುರಿಯಾಯಿತಿ ಇದೆ. ದಾವಣಗೆರೆ ನಗರದ ಇಎ​ನ್‌ಟಿ ತಜ್ಞ ಡಾ.ಎ.​ಎಂ.​ಶಿ​ವ​ಕು​ಮಾರ್‌ ಉಚಿತ ಆರೋಗ್ಯ ತಪಾ​ಸಣೆ ಘೋಷಿ​ಸಿ​ದ್ದಾರೆ. ದಾವಣಗೆರೆಯ ಶ್ರೀಮೃತ್ಯುಂಜಯ ನರ್ಸಿಂಗ್‌ ಹೋಂನಲ್ಲಿ ಉಚಿತ ಆರೋಗ್ಯ ತಪಾಸಣೆ ಮಾಡಲಾಗುತ್ತದೆ.

ಮತ ಜಾಗೃತಿಗೆ ವಿಶಿಷ್ಟ ಕಲಾಕೃತಿ

ದಾವಣಗೆರೆ: ಜನರನ್ನು ಮತದಾನಕ್ಕೆ ಪ್ರೇರೇಪಿಸುವ ಉದ್ದೇಶದಿಂದ ದಾವಣಗೆರೆ ನಗರದಲ್ಲಿ ಕಲಾವಿದನೊಬ್ಬ ವಿಶಿಷ್ಟಕಲಾಕೃತಿಗಳನ್ನು ರಚಿಸಿ ಉಚಿತವಾಗಿ ಫೋಟೋ ತೆಗೆಸಿಕೊಳ್ಳಲು ಅವಕಾಶ ನೀಡಿದ್ದಾರೆ. ಇಲ್ಲಿನ ಸಂಕ​ಲನ ಆಟ್‌​ರ್‍ ಕಲಾ ಗ್ಯಾಲ​ರಿಯ ಚಿತ್ರ ಕಲಾ​ವಿದ ರವೀಂದ್ರ ಅರಳಗುಪ್ಪೆ ಅವರು ಮತದಾನ ಮಾಡಿದ ಬೆರಳು ಶಾಹಿ​ಯನ್ನು ತೋರಿ​ಸುವ ಕಲಾ​ಕೃತಿ ರಚಿ​ಸಿದ್ದಾರೆ. ಅದರ ಪಕ್ಕ ನಾನೂ ಮತ ಚಲಾ​ಯಿ​ಸಿ​ದ್ದೇ​ನೆಂದು ಫೋಟೋ ಫ್ರೇಮ್‌ ಮಾಡಿ ಸೆಲ್ಫಿ ತೆಗೆ​ದು​ಕೊ​ಳ್ಳಲು, ಫೋಟೋ ತೆಗೆ​ಸಿ​ಕೊ​ಳ್ಳಲು ಅವ​ಕಾಶ ಮಾಡಿ​ಕೊ​ಟ್ಟಿ​ದ್ದಾರೆ. ವೋಟ್‌ ಮಾಡಿದವರು ಇಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಫೇಸ್‌ಬುಕ್‌, ವಾಟ್ಸಾಪ್‌ನಲ್ಲಿ ಪೋಸ್ಟ್‌ ಮಾಡಿ ಜಾಗೃತಿ ಮೂಡಿಸುವಂತೆ ಕಲಾವಿದ ಮನವಿ ಮಾಡಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28

Follow Us:
Download App:
  • android
  • ios