ಬೆಂಗಳೂರು, [ಏ.21]: ದೇಶಾದ್ಯಂತ ಏಪ್ರಿಲ್ 23 ರಂದು ನಡೆಯಲಿರುವ 3ನೇ ಹಂತದ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು [ಭಾನುವಾರ] ತೆರೆ ಬಿದ್ದಿದೆ. 

ಏಪ್ರಿಲ್ 23ರಂದು ಮತದಾನ ನಡೆಯಲಿರುವ  14 ರಾಜ್ಯಗಳ 115 ಕ್ಷೇತ್ರಗಳಲ್ಲಿ ಇಂದು ಅಬ್ಬರದ ಪ್ರಚಾರ ನಡೆದಿದ್ದು, ಬಹಿರಂಗ ಪ್ರಚಾರದ ಕೊನೆಯ ದಿನ ಘಾಟುಘಟಿಗಳು ಅಬ್ಬರಿಸಿ ಬೊಬ್ಬಿರಿದರು.. 

ಸುಮಾರು ಒಂದು ತಿಂಗಳಿನಿಂದ ಬೇಸಿಗೆಯ ಬಿಸಿಲಿನಲ್ಲಿ ರೋಡ್ ಶೋ, ರ್ಯಾಲಿ ನಡೆಸಿ ಫುಲ್ ಸುಸ್ತಾಗಿರುವ ಅಭ್ಯರ್ಥಿಗಳು  ಕೊನೆ ಕಸರತ್ತಿನಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಿದ್ದಾರೆ.  ಏಪ್ರಿಲ್ 23ರಂದು ಬೆಳಗ್ಗೆ 7 ಘಂಟೆಯಿಂದ ಸಂಜೆ 6 ಗಂಟೆಯವರೆಗೂ ಮತದಾನ ನಡೆಯಲಿದ್ದು, ಮೇ 23ಕ್ಕೆ ಫಲಿತಾಂಶ ಹೊರಬೀಳಲಿದೆ.

 13 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ವೋಟಿಂಗ್

3ನೇ ಹಂತದ ಚುನಾವಣೆ 13 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 116 ಕ್ಷೇತ್ರಗಳಿಗೆ ನಡೆಯಲಿದೆ. ಪ್ರಮುಖ ಅಭ್ಯರ್ಥಿಗಳೆಂದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಶಶಿ ತರೂರ್ ಇಬ್ಬರೂ ಕೇರಳದಲ್ಲಿ ಚುನಾವಣೆ ಎದುರಿಸಲಿದ್ದಾರೆ. ಇದೇ ಮೊದಲ ಬಾರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ಶಾ ಅವರು ಲೋಕಸಭೆಗೆ ಸ್ಫರ್ಧಿಸಿದ್ದು, ಗುಜರಾತ್​ನ ಗಾಂಧಿನಗರ ಕ್ಷೇತ್ರದಿಂದ ಅಖಾಡಕ್ಕಿಳಿದಿದ್ದಾರೆ.  ಇನ್ನೂ ಮಹಾರಾಷ್ಟ್ರದಿಂದ ಎನ್​ಸಿಪಿ ಅಧ್ಯಕ್ಷ ಶರತ್ ಪವಾರ್ ಅವರ ಪುತ್ರಿ, ಹಾಲಿ ಸಂಸದೆ ಸುಪ್ರಿಯಾ ಸುಳೆ ಅವರು ಕಣದಲ್ಲಿದ್ದಾರೆ. 

ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ

ಇನ್ನು, ರಾಜ್ಯದಲ್ಲಿ ನಡೆಯಲಿರುವ 2ನೇ ಮತ್ತು ಅಂತಿಮ ಹಂತದ ಚುನಾವಣೆಯಲ್ಲಿ 14 ಲೋಕಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಉತ್ತರ ಕರ್ನಾಟಕ ಭಾಗದ 14 ಲೋಕಸಭೆ ಕ್ಷೇತ್ರಗಳಲ್ಲಿ 237 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

14 ಕ್ಷೇತ್ರಗಳ ಪೈಕಿ ಶಿವಮೊಗ್ಗ, ಕಲಬುರಗಿ ಹಾಗೂ ಬಳ್ಳಾರಿ ಮತಕ್ಷೇತ್ರಗಳನ್ನು ಹೈವೋಲ್ಟೇಜ್ ಕ್ಷೇತ್ರಗಳೆಂದು ಪರಿಗಣಿಸಲಾಗಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿಗಳ ಪುತ್ರರ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. 

ಬಿಎಸ್ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಹಾಗೂ ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ನಡುವೆ ನೇರ ಹಣಾಹಣಿ ಇದೆ. ಇನ್ನು, ಕಲಬುರ್ಗಿ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್​ ತೊರೆದು ಬಿಜೆಪಿಯಿಂದ ಕಣಕ್ಕಿಳಿದಿರುವ ಡಾ.ಉಮೇಶ್ ಜಾಧವ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. 

ರಾಜ್ಯದಲ್ಲಿ ಮಂಗಳವಾರ 2.67 ಕೋಟಿ ಮತದಾರರು 237 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಈ ಮಧ್ಯೆ, ಚುನಾವಣಾ ಆಯೋಗವೂ ಬಿಗಿ ಭದ್ರತೆಯೊಂದಿಗೆ ಸುಸೂತ್ರವಾಗಿ ಚುನಾವಣೆ ನಡೆಸಲು ಸರ್ವಸನ್ನದ್ಧವಾಗಿದೆ.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.