ಶಿವಮೊಗ್ಗ/ಮಡಿಕೇರಿ :  ಮತದಾನ ಮರೆತು ಪ್ರವಾಸ ಹೊರಡುವವರಿಗೆ ಈ ಬಾರಿ ಮತದಾನದ ಜಾಗೃತಿಯ ಬಿಸಿ ಸರಿಯಾಗಿಯೇ ತಟ್ಟಲಿದೆ. ಯಾವ ಊರಿನಲ್ಲಿ ಚುನಾವಣೆ ನಡೆಯುತ್ತದೆಯೋ ಆ ಊರಿನ ಯಾರೇ ಆಗಿರಲಿ, ಅವರಿಗೆ ಚುನಾವಣೆ ದಿನ ರಾಜ್ಯದ ಶಿವಮೊಗ್ಗ ಮತ್ತು ಕೊಡಗಿನ ಹೋಟೆಲ್‌, ರೆಸಾರ್ಟ್‌ಗಳಲ್ಲಿ ರೂಂ ಪಡೆಯುವುದು ಕಷ್ಟವಾಗಲಿದೆ.

ಹೌದು, ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿ ದಯಾನಂದ ಅವರೇ ಈ ಸಂಬಂಧ ಆದೇಶವೊಂದನ್ನು ಹೊರಡಿಸಿದ್ದರೆ, ಕೊಡಗಿನಲ್ಲಿ ಸ್ವಯಂ ಪ್ರೇರಿರಾಗಿ ಹೋಟೆಲ್‌ ಹಾಗೂ ರೆಸಾರ್ಟ್‌ ಮಾಲೀಕರು ಈ ರೀತಿಯ ನಿಯಮ ಅನುಷ್ಠಾನಕ್ಕೆ ತರುತ್ತಿದ್ದಾರೆ.

ಶಿವಮೊಗ್ಗದಲ್ಲಿ ಸ್ವತಃ ಜಿಲ್ಲಾಧಿಕಾರಿ ಅವರೇ ಈ ಕುರಿತು ಎಲ್ಲ ಹೋಟೆಲ್‌ಗಳಿಗೆ ಕಡ್ಡಾಯ ಸೂಚನೆಯೊಂದನ್ನು ಹೊರಡಿಸಿದ್ದು, ಅದರಲ್ಲಿ ಯಾವುದೇ ಪ್ರವಾಸಿಗರು ಹೋಟೆಲ್‌ಗಳಲ್ಲಿ ಕೋಣೆ ಪಡೆಯಲು ಬಂದರೆ ಕೋಣೆ ನೀಡುವ ಮೊದಲು ಅವರ ಎಪಿಕ್‌ ಕಾರ್ಡ್‌ ಪರಿಶೀಲಿಸಬೇಕು. ಅವರು ಚುನಾವಣೆ ನಡೆಯುವ ಊರಿನಲ್ಲಿ ಮತದಾರರಾಗಿದ್ದರೆ, ಆ ದಿನ ಅವರು ಮತದಾನ ಮರೆತು ಪ್ರವಾಸಕ್ಕಾಗಿ ಬಂದಿದ್ದೇ ಆದರೆ ಕೋಣೆ ನೀಡಬೇಡಿ ಎಂದು ತಿಳಿಸಿದ್ದಾರೆ. ಪ್ರಜಾತಂತ್ರದ ಹಬ್ಬವಾದ ಚುನಾವಣೆಯಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಲೆಂದೇ ಈ ನಿಯಮ ಜಾರಿಗೊಳಿಸಿದ್ದಾಗಿ ಸೂಚನೆಯಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕೊಡಗಿನಲ್ಲಿ ಸ್ವಯಂ ಪ್ರೇರಿತ: ಕರ್ನಾಟಕ ಕಾಶ್ಮೀರ ಎಂದು ಕರೆಸಿಕೊಳ್ಳುವ ಕೊಡಗಿನಲ್ಲಿ ಹೊಟೇಲ್‌ ಮಾಲೀಕರೇ ಸ್ವಯಂಪ್ರೇರಿತರಾಗಿ ಮತದಾನ ದಿನ ಓಟು ಹಾಕದೆ ಇಲ್ಲಿಗೆ ಬರಬೇಡಿ ಎಂದು ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಕರ್ನಾಟಕದಲ್ಲಿ ಎರಡು ಹಂತದಲ್ಲಿ ಅಂದರೆ ಏ.18 ಮತ್ತು ಏ.24ರಂದು ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆ ದಿನ ಯಾವ್ಯಾವ ಜಿಲ್ಲೆಯಲ್ಲಿ ಮತದಾನ ನಡೆಯುತ್ತಿದೆಯೋ ಆ ಜಿಲ್ಲೆಯವರಿಗೆ ಮತಹಾಕಿಯೇ ಇಲ್ಲಿಗೆ ಬನ್ನಿ ಎಂದು ಹೋಟೆಲ್‌ ಮಾಲೀಕರು ರೂಂ ಬುಕ್‌ ಮಾಡಲು ಕರೆ ಮಾಡುವವರಿಗೆ ಹೇಳುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊಡಗು ಹೊಟೇಲ್‌, ರೆಸಾರ್ಟ್‌ ಮಾಲೀಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್‌, ಈಗಾಗಲೇ ಮುಂಚಿತವಾಗಿ ಹೊಟೇಲ್‌, ರೆಸಾರ್ಟ್‌ನಲ್ಲಿ ರೂಂ ಬುಕ್‌ ಮಾಡುತ್ತಿರುವ ಪ್ರವಾಸಿಗರಿಗೆ ಮತದಾನದ ದಿನ ಈ ಕಡೆ ಬರಬೇಡಿ, ಬರುವುದಿದ್ದರೆ ಮತಹಾಕಿಯೇ ಬನ್ನಿ ಎಂದು ಮನವಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ರಾಜ್ಯದ ಪ್ರಸಿದ್ಧ ಧಾರ್ಮಿಕ ಕೇಂದ್ರ, ಪ್ರವಾಸಿ ತಾಣ ಗೋಕರ್ಣದಲ್ಲಿ ಹೋಟೆಲ್‌ ಮಾಲೀಕರೊಬ್ಬರು ಮತದಾನದ ದಿನ ಓಟು ಹಾಕದೆ ಬರುವ ಪ್ರವಾಸಿಗರಿಗೆ ಊಟ, ತಿಂಡಿ ನೀಡುವುದಿಲ್ಲ ಎಂದು ಬೋರ್ಡ್‌ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.