ನವದೆಹಲಿ/ಕೋಲ್ಕತಾ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮಂಗಳವಾರ ಕೋಲ್ಕತಾದಲ್ಲಿ ನಡೆಸಿದ ರಾರ‍ಯಲಿ ವೇಳೆ ಸಂಭವಿಸಿದ ಹಿಂಸಾಚಾರ ಪ್ರಕರಣವು, ಬಿಜೆಪಿ ಮತ್ತು ಟಿಎಂಸಿ ನಡುವಿನ ವಾಕ್ಸಮರದ ಬೆಂಕಿಗೆ ಮತ್ತಷ್ಟುತುಪ್ಪ ಸುರಿದಿದೆ. ಹಿಂಸಾಚಾರದ ವೇಳೆ ಸಂಭವಿಸಿದ ಆಸ್ತಿಪಾಸ್ತಿ ಹಾನಿ ಮತ್ತು ಸಮಾಜ ಸುಧಾರಕ ಈಶ್ವರ ಚಂದ್ರ ವಿದ್ಯಾಸಾಗರ ಅವರ ಪ್ರತಿಮೆ ಧ್ವಂಸಕ್ಕೆ ಬಿಜೆಪಿ ಗೂಂಡಾಗಳೇ ಕಾರಣ ಎಂದು ಟಿಎಂಸಿ ದೂಷಿಸಿದ್ದರೆ, ಬಿಜೆಪಿ ಕೂಡಾ ಅದೇ ರೀತಿಯ ಪದಗಳನ್ನು ಬಳಸಿ ಟಿಎಂಸಿ ವಿರುದ್ಧ ಮರು ವಾಗ್ದಾಳಿ ನಡೆಸಿದೆ.

ಇತ್ತ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಬಿಜೆಪಿ ವಿರುದ್ಧದ ಸಂಚಿನ ಭಾಗವಾಗಿಯೇ ಈಶ್ವರ ಚಂದ್ರ ವಿದ್ಯಾಸಾಗರರ ಪ್ರತಿಮೆ ಧ್ವಂಸಗೊಳಿಸಲಾಗಿದೆ. ಒಂದು ವೇಳೆ ರೋಡ್‌ ಶೋ ವೇಳೆ ಸಿಆರ್‌ಪಿಎಫ್‌ ಭದ್ರತೆ ಇಲ್ಲದೇ ಹೋಗಿದ್ದಲ್ಲಿ ನಾನು ಪಾರಾಗುವುದೇ ಸಾಧ್ಯವಿರಲಿಲ್ಲ. ಹಿಂಸಾಚಾರಕ್ಕೆ ಟಿಎಂಸಿ ನಾಯಕರೇ ಹೊಣೆ ಎಂದು ಟೀಕಿಸಿದ್ದಾರೆ. ಇನ್ನು ಬಿಜೆಪಿ ವಿರುದ್ಧ ಟಿಎಂಸಿ ನಾಯಕರು ಸೇಡಿನ ಮಾತುಗಳನ್ನು ಆಡಿದ ಬೆನ್ನಲ್ಲೇ ಘಟನೆ ನಡೆದಿದೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ಮತ್ತೊಂದೆಡೆ ಬಂಗಾಳದಲ್ಲಿ ಇಷ್ಟೊಂದು ಹಿಂಸಾಕೃತ್ಯಗಳು ನಡೆಯುತ್ತಿದ್ದರೂ, ಚುನಾವಣಾ ಆಯೋಗ ಮೂಕಪ್ರೇಕ್ಷಕನಂತೆ ವರ್ತಿಸುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ. ಅಲ್ಲದೆ ಹಿಂಸಾಚಾರ ಖಂಡಿಸಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ಕೂಡಾ ನಡೆಸಿದೆ.

ಈ ನಡುವೆ ಹಿಂಸಾಚಾರ ಖಂಡಿಸಿರುವ ಕಾಂಗ್ರೆಸ್‌, ಘಟನೆಗೆ ಬಿಜೆಪಿ, ಆರ್‌ಎಸ್‌ಎಸ್‌, ಮೋದಿ-ಅಮಿತ್‌ ಶಾ ಅವರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ, ದೇಶದ ಪ್ರತಿಯೊಂದು ರಾಜ್ಯದ ಸಾಂಸ್ಕೃತಿಕ ಹಿನ್ನೆಲೆಗಳ ಹಾನಿ ಹಾಗೂ ದೇಶದಲ್ಲಿ ಮೊಬೊಕ್ರಸಿ(ಗಲಭೆಗಳು)ಗಳಿಗೆ ಮೋದಿ, ಶಾ ಕಾರಣ ಎಂದು ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ದೂರಿದ್ದಾರೆ. ಮತ್ತೊಂದೆಡೆ, ಬಿಜೆಪಿ-ಆರ್‌ಎಸ್‌ಎಸ್‌ ವ್ಯವಸ್ಥಿತವಾಗಿ ಬಂಗಾಳದ ದಾಳಿ ನಡೆಸುತ್ತಿವೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಆರೋಪಿಸಿದ್ದಾರೆ.

ಶಾ ವಾಗ್ದಾಳಿ:

ಬುಧವಾರ ದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ‘ಬಿಜೆಪಿ ವಿರುದ್ಧ ಸಂಚು ರೂಪಿಸುವ ಸಲುವಾಗಿಯೇ ಕೋಲ್ಕತಾದಲ್ಲಿ ಬಿಜೆಪಿ ರೋಡ್‌ ಶೋ ವೇಳೆ ಉದ್ವಿಗ್ನತೆ ಸೃಷ್ಟಿಸಿ ವಿದ್ಯಾಸಾಗರ ಅವರ ಮೂರ್ತಿಗೆ ಟಿಎಂಸಿ ಕಾರ್ಯಕರ್ತರೇ ಹಾನಿ ಮಾಡಿದ್ದಾರೆ. ಮತ್ತೊಂದೆಡೆ, ಇಂಥ ಚುನಾವಣಾ ಅಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಚುನಾವಣಾ ಆಯೋಗವು ಇಬ್ಬಗೆ ನೀತಿ ಅನುಸರಿಸುವ ಮೂಲಕ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಅಕ್ರಮಕ್ಕೆ ಸಾಥ್‌ ನೀಡುತ್ತಿದೆ,’ ಎಂದು ದೂರಿದ್ದಾರೆ.

ಜೊತೆಗೆ ರಾರ‍ಯಲಿ ವೇಳೆ ನಡೆದ ಗಲಭೆಯ ಫೋಟೋಗಳನ್ನು ಪ್ರದರ್ಶಿಸಿದ ಶಾ, ಬ್ಯಾನರ್ಜಿ ಅವರು ಇಲ್ಲಿ ಏನನ್ನೂ ಮುಚ್ಚಿಡುತ್ತಿಲ್ಲ ಎಂದಾದಲ್ಲಿ, ಈ ಬಗ್ಗೆ ಸುಪ್ರೀಂ ಅಥವಾ ಕೋಲ್ಕತಾ ಹೈಕೋರ್ಟ್‌ನ ವಿಶೇಷ ತನಿಖಾ ತಂಡದ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು. ಚುನಾವಣೆ ವೇಳೆ ಗಲಭೆ ಹಾಗೂ ಹಿಂಸಾಚಾರಗಳು ನಡೆಯುತ್ತವೆ ಎಂಬ ಕಾರಣಕ್ಕಾಗಿಯೇ ದೇಶಾದ್ಯಂತ ರೌಡಿಶೀಟರ್‌ಗಳನ್ನು ಬಂಧಿಸಲಾಯಿತು. ಆದರೆ, ಪಶ್ಚಿಮ ಬಂಗಾಳದಲ್ಲಿ ಮಾತ್ರ ರೌಡಿ ಶೀಟರ್‌ಗಳಿಂದ ಬಾಂಡ್‌ ಪಡೆದು, ಬಂಧನದಿಂದ ಮುಕ್ತಗೊಳಿಸಲಾಗಿದೆ. ಇದು ಚುನಾವಣಾ ಆಯೋಗದ ಇಬ್ಬಗೆ ನೀತಿಯಲ್ಲವೇ? ಈ ಬಗ್ಗೆ ಆಯೋಗ ಏಕೆ ಮೌನ ವಹಿಸಿದೆ, ಎಂದು ಶಾ ಕಿಡಿಕಾರಿದರು.

ಈ ನಡುವೆ ಬಿಜೆಪಿ ನಾಯಕರು, ಕೇಂದ್ರ ಸಚಿವರನ್ನು ಒಳಗೊಂಡ ನಿಯೋಗವೊಂದು ಬುಧವಾರ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರನ್ನು ಭೇಟಿ ಮಾಡಿ ಬಂಗಾಳ ಹಿಂಸಾಚಾರ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಮನವಿ ಸಲ್ಲಿಸಿತು.

ಟಿಎಂಸಿ ತಿರುಗೇಟು:

ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರೇ ವಿದ್ಯಾಸಾಗರ ಅವರ ಮೂರ್ತಿಗೆ ಹಾನಿ ಮಾಡಿದ್ದಾರೆ ಎಂಬುದರ ಉಲ್ಲೇಖವಿರುವ ವಿಡಿಯೋವನ್ನು ಬಿಡುಗಡೆ ಮಾಡುವ ಮೂಲಕ ಟಿಎಂಸಿ, ಶಾ ಅವರ ಆರೋಪಕ್ಕೆ ತಿರುಗೇಟು ನೀಡಿದೆ. ಅಲ್ಲದೆ, ಶಾ ಓರ್ವ ಸುಳ್ಳುಗಾರನಷ್ಟೇ ಅಲ್ಲ. ಬದಲಿಗೆ ವಿಶ್ವಾಸಘಾತಕ ಎಂಬುದನ್ನು ಈ ವಿಡಿಯೋ ನಿರೂಪಿಸಿದೆ ಎಂದು ಕಿಡಿಕಾರಿದ ಡೆರಿಕ್‌ ಓ’ ಬ್ರಿಯಾನ್‌ ಅವರ ನೇತೃತ್ವದ ಟಿಎಂಸಿ ಸಂಸದರ ತಂಡ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಅಲ್ಲದೆ, ಟಿಎಂಸಿ ಹಾಗೂ ಪೊಲೀಸರ ವಿರುದ್ಧದ ಹೋರಾಟಕ್ಕೆ ಪ್ರತಿಯೊಬ್ಬರು ಕೈಯಲ್ಲಿ ರಾಡು ಮತ್ತು ಶಸ್ತ್ರಾಸ್ತ್ರಗಳನ್ನು ಹಿಡಿದು ಅಮಿತ್‌ ಶಾ ಅವರ ರಾರ‍ಯಲಿಗೆ ಆಗಮಿಸಬೇಕು ಎಂದು ಬಿಜೆಪಿ ಬೆಂಬಲಿಗರು ಸಾರ್ವಜನಿಕರಿಗೆ ಮನವಿ ಮಾಡುವ ವಿಡಿಯೋವೊಂದನ್ನು ಸಹ ಟಿಎಂಸಿ ಬಿಡುಗಡೆ ಮಾಡಿದೆ. ಒಟ್ಟಾರೆ, ಕೋಲ್ಕತಾದಲ್ಲಿ ಶಾ ರಾರ‍ಯಲಿಯಲ್ಲಿ ನಡೆದ ಹಿಂಸಾಚಾರ ಹಾಗೂ ವಿದ್ಯಾಸಾಗರ ಅವರ ಮೂರ್ತಿಗೆ ಹಾನಿಯಾಗಲು ಬಿಜೆಪಿಯೇ ಕಾರಣ ಎಂಬುದನ್ನು ನಿರೂಪಿಸುವ ಇಂಥ 44 ವಿಡಿಯೋಗಳು ತಮ್ಮ ಬಳಿಯಿವೆ ಎಂದು ಟಿಎಂಸಿ ಸಂಸದ ಡೆರಿಕ್‌ ಹೇಳಿದ್ದಾರೆ.