ಬೆಂಗಳೂರು :  ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧಿಕಾರದ ಮದದಿಂದ ಮಾತನಾಡಿದ್ದು, ಚುನಾವಣೆಯಲ್ಲಿ ಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ  ಪ್ರತಿಕ್ರಿಯಿಸಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಸ್‌.ಎಂ.ಕೃಷ್ಣ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಅಧಿಕಾರ ಎಂಬುದು ಶಾಶ್ವತವಲ್ಲ. ಇಂತಹ ಎಷ್ಟೋ ಅಧಿಕಾರವನ್ನು ಎಸ್‌.ಎಂ.ಕೃಷ್ಣ ನೋಡಿ ಬಿಟ್ಟವರು. ಕುಮಾರಸ್ವಾಮಿ ಅವರು ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬ ಬಗ್ಗೆ ತಿಳಿದು ಮಾತನಾಡಬೇಕು ಎಂದು ಸಲಹೆ ನೀಡಿದರು.

ಪ್ರಚಲಿತ ರಾಜಕೀಯ ಪರಿಸ್ಥಿತಿ ಹಾಗೂ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ ಎಸ್‌.ಎಂ.ಕೃಷ್ಣ ಅವರ ಬಳಿ ಚರ್ಚೆ ನಡೆಸಿದ್ದೇನೆ. ಕೆಲವೊಂದು ವಿಚಾರದಲ್ಲಿ ಅವರ ಸಲಹೆ ಪಡೆದುಕೊಂಡಿದ್ದೇನೆ. ರಾಜ್ಯದ ಏಳೆಂಟು ಕ್ಷೇತ್ರಕ್ಕೆ ಎಸ್‌.ಎಂ.ಕೃಷ್ಣ ಅವರ ಅಗತ್ಯವಿದೆ. ಹೀಗಾಗಿ ಮಂಡ್ಯ, ರಾಮನಗರ, ಕೋಲಾರ, ಬೆಂಗಳೂರು, ಹಾಸನ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಕೃಷ್ಣ ಅವರ ಪ್ರವಾಸದಿಂದ ನಮಗೆ ಆನೆ ಬಲ ಬಂದಂತಾಗಿದೆ ಎಂದರು.

ಮಂಡ್ಯದಲ್ಲಿ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಬಗ್ಗೆ ಕೃಷ್ಣ ಅವರ ಜತೆ ಚರ್ಚೆ ಮಾಡಿದ್ದೇನೆ. ಬಿಜೆಪಿ ಬೇರೆ ಅಭ್ಯರ್ಥಿಗಳ ಬಗ್ಗೆಯೂ ಚರ್ಚಿಸಿದ್ದೇನೆ. ಮಂಡ್ಯದ ಬಗ್ಗೆ ಕೃಷ್ಣ ಅವರ ಅಭಿಪ್ರಾಯ ಪಡೆಯಲಾಗಿದೆ. ಸುಮಲತಾ ಅವರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು. ರಾಜ್ಯದಲ್ಲಿ ಬಿಜೆಪಿ ಹಾಗೂ ಮೋದಿ ಪರವಾದ ಅಲೆ ಇದ್ದು, 22 ಸ್ಥಾನಗಳಲ್ಲಿ ಪಕ್ಷ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಎಸ್‌.ಎಂ.ಕೃಷ್ಣ, ಚುನಾವಣೆಯ ರೂಪರೇಷೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ನನ್ನ ಅಗತ್ಯವಿರುವ ಕ್ಷೇತ್ರಗಳಿಗೆ ತೆರಳಿ ಕೈಲಾದಷ್ಟುಸಹಾಯ ಮಾಡುತ್ತೇನೆ. ಬಿಜೆಪಿ ಕಾರ್ಯಕರ್ತನಾಗಿ ಪಕ್ಷಕ್ಕೆ ಸಂಪೂರ್ಣ ಸಹಕಾರ ನೀಡಲಿದ್ದೇನೆ. ನಾನು ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಂಶಪಾರಂಪರ್ಯ ಆಡಳಿತದ ಬಗ್ಗೆ ನಾನು ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಕುಮಾರಸ್ವಾಮಿ ಅವರು ಏನು ಹೇಳಬೇಕೋ ಹೇಳಿದ್ದಾರೆ. ಈಗ ಜನ ಎಲ್ಲವನ್ನೂ ನಿರ್ಧಾರ ಮಾಡಲಿದ್ದಾರೆ. ರಾಜ್ಯಸಭೆ ಚುನಾವಣೆ ವೇಳೆ ದೇವೇಗೌಡರು ನನಗೆ ಬೆಂಬಲ ನೀಡಿದ್ದ ವಿಚಾರವನ್ನು ಹಲವು ವೇದಿಕೆಗಳಲ್ಲಿ ಬಹಿರಂಗವಾಗಿ ಹೇಳಿದ್ದೇನೆ. ಅದರಲ್ಲಿ ಯಾವುದೇ ರಹಸ್ಯ ಇಲ್ಲ ಎಂದು ಹೇಳಿದರು.

ವಿಧಾನಪರಿಷತ್‌ ಸದಸ್ಯ ರವಿಕುಮಾರ್‌, ಬಿಜೆಪಿ ಮಾಧ್ಯಮ ಸಹ ವಕ್ತಾರ ಆನಂದ್‌ ಇನ್ನಿತರರಿದ್ದರು. ಎಸ್‌.ಎಂ.ಕೃಷ್ಣ ಅವರನ್ನು ಭೇಟಿಯಾದ ಬಿ.ಎಸ್‌.ಯಡಿಯೂರಪ್ಪ ಅವರು ಕೃಷ್ಣ ಅವರಿಗೆ ಹೂಗುಚ್ಛ ನೀಡಿ ಶುಭ ಕೋರಿದರು.