ಬೆಂಗಳೂರು: ತೇಜಸ್ವಿನಿ ಅನಂತ್‌ಕುಮಾರ್‌ ಅವರೇ ಅಭ್ಯರ್ಥಿ ಎಂದು ಪರಿಗಣಿಸಿದ್ದ ಬೆಂಗಳೂರು ದಕ್ಷಿಣಕ್ಕೆ ಕಡೆ ಘಳಿಗೆಯಲ್ಲಿ 28 ವರ್ಷದ ತೇಜಸ್ವಿ ಸೂರ್ಯನನ್ನು ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಿಜೆಪಿ ಅಭ್ಯರ್ಥಿಯನ್ನಾಗಿ ಆರಿಸಿದ್ದಾರೆ. 

ಎಬಿವಿಪಿ ಕಾರ್ಯಕರ್ತರಾಗಿ ಉತ್ತಮ ಸಂಘಟರಾಗಿ ಹೆಸರು ಮಾಡಿರುವ, ಬಿಜೆಪಿ ಯುವ ಮೋರ್ಚಾ ಪ್ರದಾನ ಕಾರ್ಯದರ್ಶಿ ತೇಜಸ್ವಿ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯಂ ಅವರ ಅಣ್ಣನ ಮಗ. ಮೋದಿ ಪರ ಸದಾ ಬ್ಯಾಟಿಂಗ್ ಮಾಡುವ ತೇಜಸ್ವಿ ಅವರ ವೀಡಿಯೋ ತುಣುಕುಗಳು ಸದಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಆ ಮೂಲಕವೇ ಮುನ್ನೆಲೆಗೆ ಬಂದವರು. ಅಲ್ಲದೇ ರಾಜ್ಯ ಹಾಗೂ ರಾಷ್ಟ್ರ ಸುದ್ದಿ ವಾಹಿನಿಗಳಲ್ಲಿ ಸದಾ ಕಾಣಿಸಿಕೊಳ್ಳುವ ತೇಜಸ್ವಿ, ತಮ್ಮ ಖಡಕ್ ಮಾತುಗಳಿಂದಲೇ ಪ್ರಸಿದ್ಧರಾದವರು. 

ತನ್ನ 8ನೇ ಪಟ್ಟಿಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿ ಹೆಸರನ್ನು ಮಧ್ಯ ರಾತ್ರಿ ಘೋಷಿಸಿದ್ದು, ತೇಜಸ್ವಿ ಅವರು ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ. ಇವರ ಆಯ್ಕೆಗೆ ಬಿಜೆಪಿ ವಕ್ತಾರ ಅಮಿತ್ ಮಾಳವೀಯಾ, ರಕ್ಷಣಾ ಮಂತ್ರಿ ನಿರ್ಮಲಾ ಸೀತರಾಮನ್, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸೇರಿ ಅನೇಕರು ಹರ್ಷ ವ್ಯಕ್ತಪಡಿಸಿದ್ದು, ಟ್ವೀಟರ್‌ನಲ್ಲಿ ಶುಭ ಕೋರಿದ್ದಾರೆ. 

ತಮ್ಮ ಆಯ್ಕೆಗೆ ಭಾವುಕರಾದ ತೇಜಸ್ವಿ ಅವರೂ ಅತೀವ ಹರ್ಷ ವ್ಯಕ್ತಪಡಿಸಿದ್ದು, 'ನನ್ನನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಕ್ಕೆ, ಮುಂದೆ ಮಾಡಬೇಕಾದ ಕೆಲಸಗಳನ್ನು ನೆನೆದು ನಿದ್ರೆಯೇ ಬರುತ್ತಿಲ್ಲ. ಭವಿಷ್ಯದ ಬಗ್ಗೆ ಭರವಸೆ ಮೂಡುತ್ತಿದೆ. ಮೋದಿ ದಿನಕ್ಕೆ 20 ಗಂಟೆ ಕೆಲಸ ಮಾಡುವವರಾದೆ, 28 ವರ್ಷದ ನಾನು ಅವರಿಗಿಂತ ಹೆಚ್ಚು ಕೆಲಸ ಮಾಡಬೇಕು,' ಎಂದಿದ್ದಾರೆ. ಪೋಷಕರಿಗೂ ಕೃತಜ್ಞತೆ ಸಲ್ಲಿಸಿರುವ ತೇಜಸ್ವಿ, 'ಜೀವನದಲ್ಲಿ ಪ್ರಾಮಾಣಿಕತೆ ಕಲಿಸಿ, ಉತ್ತಮ ಪ್ರಜೆಯನ್ನಾಗಿಸಿದ್ದಕ್ಕೆ ಥ್ಯಾಂಕ್ಸ್,' ಎಂದು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. 

ಅತ್ಯುತ್ತಮ ಸಂಘಟಕನ್ನಾಗಿ ಮಾಡಿದ ಎಬಿವಿಪಿ, ಹಾಗೂ ಬಿಜೆಪಿಗೂ ತೇಜಸ್ವಿ ಟ್ವೀಟ್ ಮೂಲಕವೇ ಕೃತಜ್ಞತೆ ಸಲ್ಲಿಸಿ, ಮುಂದಿನ ಕೆಲಸಕ್ಕೆ ಅಣಿಯಾಗುವುದಾಗಿ ಹೇಳಿದ್ದಾರೆ.

ತೇಜಸ್ವಿ ಇರೋ ಸೂರ್ಯ:
ಹಿಂದೊಮ್ಮೆ ಪ್ರಧಾನಿ ಮೋದಿ ಅವರು ಕರ್ನಾಟಕ ಯುವ ಮೋರ್ಚಾ ಸದಸ್ಯರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದರು. ತಮ್ಮನ್ನು ಪರಚಯಿಸಿಕೊಂಡು ಮೋದಿಯೊಂದಿಗೆ ಮಾತನಾಡಿದ ತೇಜಸ್ವಿಗೆ 'ನೀನು ಸೂರ್ಯ, ನಿನ್ನಲ್ಲಿ ತೇಜಸ್ಸು ಇದೆ...' ಎಂದು ಹೇಳಿದ್ದು, ಇದೀಗ ಆ ವೀಡಿಯೂ ವೈರಲ್ ಆಗುತ್ತಿದೆ.