ಬೆಂಗಳೂರು:  ಮಂಡ್ಯ ಲೋಕಸಭಾ ಕ್ಷೇತ್ರದಿಂದ ತಾತ್ಕಾಲಿಕವಾಗಿ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಅಭಿಪ್ರಾಯ ಭಾನುವಾರ ನಡೆದ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಪ್ರಸ್ತಾಪವಾಗಿದೆ.

ಸುಮಲತಾ ಅಂಬರೀಷ್‌ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತವಾಗಿದ್ದು, ಅವರನ್ನು ಬೆಂಬಲಿಸಲು ಬಿಜೆಪಿಯ ವರಿಷ್ಠರು ಸೂಚನೆಯನ್ನೂ ನೀಡಿದ್ದಾರೆ. ಆದರೆ, ನಾಮಪತ್ರ ಸಲ್ಲಿಕೆ ವಾಪಸ್‌ ವೇಳೆ ಅನಿರೀಕ್ಷಿತ ಘಟನೆ ನಡೆದು ಕಣದಿಂದ ಹಿಂದೆ ಸರಿದಲ್ಲಿ ಆಗ ಜೆಡಿಎಸ್‌ನ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಎದುರಾಳಿಯೇ ಇಲ್ಲದಂತಾಗುತ್ತದೆ. 

ಹೀಗಾಗಿ, ಬಿಜೆಪಿಯಿಂದ ಮೊದಲು ಅಭ್ಯರ್ಥಿಯನ್ನು ಕಣಕ್ಕಿಳಿಸಿ ನಂತರ ಸುಮಲತಾ ಅವರಿಗೆ ಬೆಂಬಲ ಸೂಚಿಸಿ ವಾಪಸ್‌ ಪಡೆಯುವುದು ಸೂಕ್ತ. ಆದರೂ ಈ ವಿಷಯದಲ್ಲಿ ಪಕ್ಷದ ವರಿಷ್ಠರ ನಿಲುವೇ ಅಂತಿಮ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದು ತಿಳಿದು ಬಂದಿದೆ.