ರಾಹುಲ್‌ ಆದಾಯ 54 ಲಕ್ಷದಿಂದ 9 ಕೋಟಿ ಹೇಗೆ?: ಬಿಜೆಪಿ| ಮೂಲವಿಲ್ಲದೆ ಆದಾಯ ಗಳಿಕೆ ರಾಹುಲ್‌ ಮಾದರಿ ಅಭಿವೃದ್ಧಿಯೇ?| ರಾಹುಲ್‌ ಕುರಿತು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಲೇವಡಿ

ನವದೆಹಲಿ[ಮಾ.24]: ಯುಪಿಎ ಅಧಿಕಾರಾವಧಿಯಲ್ಲಿದ್ದ 2004ರಿಂದ 2014ರ ಅವಧಿಯೊಳಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಆದಾಯ ಏಕಾಏಕಿ 9 ಕೋಟಿ ರು.ಗೆ ಏರಿಕೆಯಾಗಿದೆ. ಆದರೆ, ಈ ಆದಾಯಕ್ಕೆ ರಾಹುಲ್‌ ಗಾಂಧಿ ಬಳಿ ಯಾವುದೇ ಮೂಲಗಳಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿಯ ಆ ಆರೋಪದ ಬಗ್ಗೆ ಕಾಂಗ್ರೆಸ್‌ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಅವರು, ‘2004ರಲ್ಲಿ 55,38,123 ರು. ಇದ್ದ ರಾಹುಲ್‌ ಗಾಂಧಿ ಅವರ ಆದಾಯ 2009ರಲ್ಲಿ 2 ಕೋಟಿ ರು.ಗೆ ಏರಿಕೆಯಾಗಿತ್ತು. ಆದರೆ, 2014ರ ಲೋಕಸಭಾ ಚುನಾವಣೆ ಅಫಿಡೇವಿಟ್‌ನಲ್ಲಿ ಅದು 9 ಕೋಟಿ ರು.ಗೆ ಜಿಗಿದಿದೆ. ಓರ್ವ ಸಂಸದನ ಆದಾಯ ಎಷ್ಟುಎಂಬುದು ನಮಗೆಲ್ಲರಿಗೂ ಗೊತ್ತಿದೆ,’ ಎಂದರು.

‘2004ರಲ್ಲಿ 55 ಲಕ್ಷ ರು. ಇದ್ದ ರಾಹುಲ್‌ ಗಾಂಧಿ ಅವರ ಆದಾಯವು 2014ರ ಅವಧಿಯಲ್ಲಿ 9 ಕೋಟಿ ರು.ಗೆ ಏರಿಕೆಯಾಗಿದೆ. ಈ ಬಗ್ಗೆ ಅವರ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆಯ ಅಫಿಡವಿಟ್‌ನಿಂದ ಬಹಿರಂಗವಾಗಿದೆ. ಓರ್ವ ಸಂಸದನ ಆದಾಯ ಈ ಪರಿಯಾಗಿ ಒಮ್ಮೆಲ್ಲೇ ಏರಿಕೆಯಾಗಿದ್ದು ಹೇಗೆ. ಯಾವುದೇ ಮೂಲಗಳಿಲ್ಲದೆ ಆದಾಯ ಏರಿಕೆಯಾಗುವುದೇ ರಾಹುಲ್‌ ಗಾಂಧಿ ಅವರ ಅಭಿವೃದ್ಧಿಯ ಮಾದರಿಯೇ,’ ಎಂದು ವ್ಯಂಗ್ಯವಾಡಿದರು.