ವಿಧಾನಸಭಾ ಚುನಾವಣೆ ವೇಳೆ ಮುಖ್ಯ ಚರ್ಚೆಯ ವಿಷಯವಾಗಿದ್ದ ವೀರಶೈವ, ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಕಾಂಗ್ರೆಸ್ ಮುಖಂಡರಿಬ್ಬರು ಈ ವಿಚಾರವಾಗಿ ವಿರೋಧ ಹೇಳಿಕೆ ನೀಡುತ್ತಿದ್ದಾರೆ. ಈ ಸಂಬಂಧವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡ್ಯೂರಪ್ಪ ಎದುರೇಟು ನೀಡಿದ್ದು ಹೀಗೆ...

ಚಿತ್ರದುರ್ಗ: ಕರ್ನಾಟಕದಲ್ಲಿ ನಡೆಯುತ್ತಿರುವ ಮೊದಲ ಹಂತದ ಚುನಾವಣೆಗೆ ಇಂದು ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಕಡೇ ದಿನದ ಕಸರತ್ತು 14 ಲೋಕಸಭಾ ಕ್ಷೇತ್ರಗಳಲ್ಲಿ ಭರದಿಂದ ಸಾಗುತ್ತಿದ್ದು, ಆರೋಪ, ಪ್ರತ್ಯಾರೋಪಗಳ ಜತೆ ಭಾವನಾತ್ಮಕ ವಿಷಯಗಳಿಂದ ಜನರ ಮನ ಗೆಲ್ಲುವ ಯತ್ನ ನಡೆಯುತ್ತಿದೆ. 

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆ ವೇಳೆ ಮುಖ್ಯ ವಿಷಯವಾಗಿದ್ದ ವೀರಶೈವ, ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ, ಈ ಲೋಕಸಭಾ ಚುನಾವಣೆ ವೇಳೆ ಮತ್ತೆ ಮುನ್ನೆಲೆಗೆ ಬಂದಿದೆ. ಅದರಲ್ಲಿಯೂ ಕಾಂಗ್ರೆಸ್‌ನ ಇಬ್ಬರು ಪ್ರಭಾವಿ ಮುಖಂಡರ ನಡುವೆಯೇ ಈ ವಿಷಯವಾಗಿ ವಾದ, ವಿವಾದಗಳು ನಡೆಯುತ್ತಿದ್ದು, ಧರ್ಮದ ವಿಚಾರವನ್ನು ಮತ್ತೆ ಎಳೆದು ತರಲಾಗುತ್ತಿದೆ. 

ವೀರಶೈವ ಪ್ರತ್ಯೇಕ ಧರ್ಮದ ವಿಚಾರವಾಗಿ ಉತ್ತರ ಕರ್ನಾಟಕದ ಕಾಂಗ್ರೆಸ್ ಮುಖಂಡ, ಗೃಹ ಸಚಿವ ಎಂ.ಬಿ.ಪಾಟೀಲ್ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನಡೆಸುತ್ತಿರುವ ವಾದ, ವಿವಾದಗಳ ಬಗ್ಗೆ ಚಳ್ಳೆಕೆರೆಯಲ್ಲಿ ಮಾಜಿ ಸಿಎಂ ಬಿ.ಎಸ್.‌ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, 'ಸೋನಿಯಾ ಗಾಂಧಿ ಅಣತಿ ಮೇರೆಗೆ ಬೆಂಕಿ ಹಚ್ಚುವ ಕೆಲಸವಾಗುತ್ತಿದೆ. ಇದನ್ನು ಸ್ವತಃ ಪಾಟೀಲರೇ ಒಪ್ಪಿಕೊಂಡಿದ್ದಾರೆ. ಸಮಾಜ ಒಡೆಯುವ ಷಡ್ಯಂತ್ರದಲ್ಲಿ ಸೋನಿಯಾ ಸಹ ಭಾಗಿಯಾಗಿದ್ದಾರೆ. ವೀರಶೈವ ಸಮಾಜದ ಜನ ಈ ಬಗ್ಗೆ ಅರಿತುಕೊಳ್ಳಬೇಕಿದೆ. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯುವ ಹುನ್ನಾರವಿದು. ಆದರೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ 104 ಸ್ಥಾನಗಳನ್ನು ಗೆದ್ದಿದೆ. ಈಗ ಲೋಕಸಭಾ ಚನಾವಣೆ ವೇಳೆ ಸತ್ಯ ಸಂಗತಿ ಬಯಲಾಗಿದೆ,' ಎಂದರು.

'ನಾನು ನಾಯಕ ಎಂಬ ಬಗ್ಗೆ ಸಿದ್ಧರಾಮಯ್ಯ ಸರ್ಟಿಫಿಕೇಟ್ ನೀಡುವ ಅಗತ್ಯವಿಲ್ಲ. ಮೈತ್ರಿ ಸರ್ಕಾರ ಬೀಳುತ್ತದೆಂದು ನಾವೆಲ್ಲಿ ಹೇಳಿದ್ದೇವೆ? ಅವರು ಬೇಕಾದರೆ ಸರ್ಕಾರವನ್ನು ಉಳಿಸಿಕೊಳ್ಳಲಿ,' ಎಂದು ಯಡಿಯೂರಪ್ಪ ಒಬ್ಬ ಲೀಡರಾ ಎಂಬ ಸಿದ್ಧರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.

ಮಂಡ್ಯದಲ್ಲಿ ಜೆಡಿಎಸ್ ಸಭೆಗೆ ಬರುವವರಿಗೆ ತಲೆಗೆ 500 ರೂ. ಕೊಡುವ ವಿಚಾರವಾಗಿ ಸಂಸದ ಶಿವರಾಮೇಗೌಡ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಎಸ್‌ವೈ, 'ತಲೆಗೆ 500 ಅಷ್ಟೇ ಅಲ್ಲ, 150 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಹಣದ ಬಲದಿಂದ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಚುನಾವಣೆ ಆಯೋಗ ಈ ಬಗ್ಗೆ ಗಮನಹರಿಸಲಿ,' ಎಂದು ಆಗ್ರಹಿಸಿದರು.

ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಏಪ್ರಿಲ್ 18ರ ಗುರುವಾರ ನಡೆಯಲಿದ್ದು, 28ರಲ್ಲಿ 14 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿವೆ. ಮಂಡ್ಯ, ಬೆಂಗಳೂರಿನ ನಾಲ್ಕು ಕ್ಷೇತ್ರಗಳು ಮೊದಲ ಹಂತದಲ್ಲಿ ನಡೆಯುವ ಲೋಕಸಭಾ ಕ್ಷೇತ್ರಗಳಲ್ಲಿ ಮುಖ್ಯವಾದವು.