ನವದೆಹಲಿ(ಮೇ.07): ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ ದೇಶದ ನಂ.1 ಭ್ರಷ್ಟಾಚಾರಿ ಎಂಬ  ಪ್ರಧಾನಿ ಮೋದಿ ಹೇಳಿಕೆಗೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರತಿಕ್ರಿಯೆ ಎಲ್ಲೆಡೆ ಚರ್ಚೆಯಾಗುತ್ತಿದೆ.

ಪ್ರಧಾನಿ ಮೋದಿ ನಮ್ಮ ಕುಟುಂಬದ ಮೇಲೆ ಅದೆಷ್ಟೇ ಖಾರವಾಗಿ ಹೇಳಿಕೆ ನೀಡಿದರೂ, ಪ್ರತಿಯಾಗಿ ನಮ್ಮ ಕುಟುಂಬದಿಂದ ಅವರಿಗೆ ಪ್ರೀತಿಯೇ ಸಿಗುತ್ತದೆ ಎಂದು ರಾಹುಲ್ ಹೇಳಿದ್ದರರು.

ನಮ್ಮ ತಂದೆಯ ವಿರುದ್ಧ ಹೀನ ಆರೋಪ ಮಾಡಿದ್ದ ನಿಮಗೆ ನನ್ನ ಬಿಗು ಅಪ್ಪುಗೆಗಳು ಎಂದು ರಾಹುಲ್ ಟ್ವೀಟ್ ಕೂಡ ಮಾಡಿದ್ದರು. ರಾಹುಲ್ ಪ್ರತಿಕ್ರಿಯೆ ಸೌಮ್ಯ ಮತ್ತು ಪ್ರಬುದ್ಧವಾಗಿತ್ತು ಎಂಬ ಮಾತುಗಳು ರಾಜಕಾರಣದ ಮೊಗಸಾಲೆಯಲ್ಲಿ ಕೇಳಿ ಬರುತ್ತಿದ್ದವು.

ಆದರೆ ಈ ಎಲ್ಲ ನಿರೀಕ್ಷೆಗಳನ್ನು ಹುಸಿ ಮಾಡಿರುವ ಬಿಜೆಪಿ, ರಾಹುಲ್ ಮತ್ತು ಕಾಂಗ್ರೆಸ್ ಅವಕಾಶ ಸಿಕ್ಕಾಗಲೆಲ್ಲಾ ಪ್ರಧಾನಿ ಮೋದಿ ಮೇಲೆ ವೈಯಕ್ತಿಕ ವಾಗ್ದಾಳಿ ನಡೆಸಿದೆ ಎಂದು ಬಿಜೆಪಿ ಹರಿಹಾಯ್ದಿದೆ.

ರಾಹುಲ್ ತಮ್ಮ ಚುನಾವಣಾ ಭಾಷಣಗಳಲ್ಲಿ ಪ್ರಧಾನಿ ಮೋದಿ ಅವರನ್ನು ಚೋರ್(ಕಳ್ಳ) ಎಂದು ಸಂಬೋಧಿಸುತ್ತಾರೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಲ್ಲ ಎಂದು ಕಾಂಗ್ರೆಸ್ ಹೇಳುತ್ತದೆ. ಅದೇ ರಾಜೀವ್ ಗಾಂಧಿ ಅಥವಾ ಇನ್ಯಾವುದೇ ಕಾಂಗ್ರೆಸ್ ನಾಯಕರನ್ನು ಭ್ರಷ್ಟಾಚಾರಿ ಎಂದು ಕರೆದರೆ ಅದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಎಂದು ಕಾಂಗ್ರೆಸ್ ಬೊಬ್ಬೆ ಹೊಡೆಯುತ್ತದೆ. ದೇಶದಲ್ಲಿ ಎರಡು ನೀತಿ ಸಂಹಿತೆಗಳಿವೆಯೇ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿಯನ್ನು ಕಳ್ಳ, ಹಿಟ್ಲರ್, ಸಾವಿನ ವ್ಯಾಪಾರಿ ಹೀಗೆ ಏನೆಲ್ಲಾ ಕೀಳು ಭಾಷೆ ಬಳಸಿ ನಿಂದಿಸಬೇಕೋ ಅದೆಲ್ಲವನ್ನೂ ಕಾಂಗ್ರೆಸ್ ಬಳಿಸಿದೆ. ಇದೀಗ ತಮ್ಮ ಕುಟುಂಬವನ್ನು ಟೀಕಿಸಿದರೆ ಪ್ರೀತಿ ಮತ್ತು ಅಪ್ಪುಗೆ ಎಂದೆಲ್ಲಾ ನಾಟಕವಾಡುತ್ತಾರೆ  ಎಂದು ಜೇಟ್ಲಿ ಹರಿಹಾಯ್ದಿದ್ದಾರೆ. 

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ