ಲೋಕಸಭೆ ಚುನಾವಣೆ ಅಬ್ಬರ ದಿನೇ ದಿನೇ ಹೆಚ್ಚುತ್ತಿದೆ. ರಾಮಮಂದಿರ, ರಾಷ್ಟ್ರೀಯತೆ, ಸರ್ಜಿಕಲ್ ಸ್ಟ್ರೈಕ್ ಹೀಗೆ ನಾನಾ ವಿಷಯಗಳು ಪ್ರಚಾರಕ್ಕೆ ಬಂದಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ‘ನ್ಯೂಸ್ ನೇಶನ್’ ಮತ್ತು ‘ಇಂಡಿಯನ್ ಎಕ್ಸ್‌ಪ್ರೆಸ್’ಗೆ ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಇತ್ತೀಚೆಗೆ ವಾರಾಣಸಿಯಲ್ಲಿ ನರೇಂದ್ರ ಮೋದಿ ಅವರು ನಡೆಸಿದ ಅದ್ಧೂರಿ ರೋಡ್ ಶೋನಿಂದ ಬೃಹತ್ ಬದಲಾವಣೆಯಾಗುತ್ತದೆ ಎಂದು ಅನಿಸುತ್ತಾ?

ಕಳೆದ ೪ ತಿಂಗಳಿನಿಂದ ಸುಮಾರು 259 ಲೋಕಸಭಾ ಕ್ಷೇತ್ರಗಳ ಪ್ರಚಾರದಲ್ಲಿ ಭಾಗಿಯಾಗಿದ್ದೇನೆ. ನಾನು ಹೋದಲ್ಲೆಲ್ಲಾ ಮೋದಿ, ಮೋದಿ ಎಂಬ ಉದ್ಘೋಷ ಕೇಳಿದ್ದೇನೆ. ದೇಶದ ಜನರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೇ ಮತ ಹಾಕಲು, ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನಿರ್ಧಾರ ಮಾಡಿದ್ದಾರೆ. ಅದಕ್ಕೆ ವಾರಾಣಸಿಯೂ ಹೊರತಾಗಿಲ್ಲ.

ಉತ್ತರ ಪ್ರದೇಶದಲ್ಲಿ ಬಿಜೆಪಿ 73 ಸೀಟು ಗೆಲ್ಲುತ್ತದೆ ಎಂದು ನೀವು ಹೇಳುತ್ತೀದ್ದೀರಿ. ಹೇಗೆ ಅಷ್ಟು ಆತ್ಮವಿಶ್ವಾಸ?

2014 ರ ಲೋಕಸಭಾ ಚುನಾವಣೆ ಮತ್ತು 2017 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಾಧಾರಣ ಜಯ ಸಿಕ್ಕಿತ್ತು. ಹಾಗೆಯೇ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡೂ ಜನ ಬಯಸಿದ್ದಕ್ಕಿಂತ ಹೆಚ್ಚು ಕೆಲಸ ಮಾಡಿವೆ. ಎರಡನೆಯದಾಗಿ ಒಂದು ಘಟಕವಾಗಿ 2014 ರಲ್ಲಿ ಅಷ್ಟೊಂದು ಪ್ರಬಲವಾಗಿರಲಿಲ್ಲ. ಆದರೆ 2017 ಮತ್ತು 2019 ರಲ್ಲಿ ಪಕ್ಷವು ಹೆಚ್ಚು ಶಕ್ತಿಶಾಲಿಯಾಗಿ ಹೊರಹೊಮ್ಮಿದೆ. ಮೋದಿ ಅವರ ಜನಪ್ರಿಯತೆಯೂ ಹೆಚ್ಚಿದೆ. ಹಾಗಾಗಿ ನಾನು ಹೆಚ್ಚು ಆತ್ಮವಿಶ್ವಾಸದಿಂದಿದ್ದೇ

 3 ನೇ ಹಂತದ ಚುನಾವಣೆ ವೇಳೆ ಇವಿಎಂಗಳಲ್ಲಿ ದೋಷ ಕಾಣಿಸಿಕೊಂಡ ಬಗ್ಗೆ ಅಖಿಲೇಶ್ ಯಾದವ್ ಮತ್ತು ಮಾಯಾವತಿ ಪ್ರಶ್ನಿಸಿದ್ದಾರೆ. ಇವಿಎಂ ಈ ಚುನಾವಣೆಯ ಪ್ರಮುಖ ವಿಷಯವೇ?

ಪ್ರತಿ ಬಾರಿ ವಿರೋಧ ಪಕ್ಷಗಳು ಸೋತಾಗಲೂ ಇವಿಎಂ ವಿಷಯ ಪ್ರಸ್ತಾಪಿಸುತ್ತವೆ. ಈ ಬಾರಿ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಈ ಆರೋಪ ಕೇಳಿಬರುತ್ತಿದೆ. ಇದರರ್ಥ ಅವರುಗಳೆಲ್ಲಾ ಈಗಾಗಲೇ ಸೋಲನ್ನು ಒಪ್ಪಿಕೊಂಡಿದ್ದಾರೆಂದು. ನಾನೊಂದು ಕೇಳಲೇಬೇಕು, ಛತ್ತೀಸ್‌ಗಢ, ಮಧ್ಯಪ್ರದೇಶದಲ್ಲಿ ನಡೆದ ಚುನಾವಣೆಗಳು ಬ್ಯಾಲೆಟ್ ಪೇಪರ್ ಮೂಲಕ ನಡೆದಿತ್ತೇ ಅಥವಾ ಇವಿಎಂ ಮೂಲಕ ನಡೆದಿತ್ತೇ? ಮಾಯಾವತಿ ಮತ್ತು ಅಖಿಲೇಶ್ ಈ ಬಗ್ಗೆ ಏಕೆ ಮಾಡನಾಡುವುದೇ ಇಲ್ಲ?

ನೀವು ಮತ್ತು ಪ್ರಧಾನಿ ಮೋದಿ ಭೋಪಾಲ್ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಅವರನ್ನು ಸಮರ್ಥಿಸಿದ ಬಳಿಕ ಬಿಜೆಪಿ ಬಲಪಂಥೀಯ ಹಿಂದೂವಾದವನ್ನು ಬೆಂಬಲಿಸುತ್ತಿದೆ ಎಂದು ವಿರೋಧ ಪಕ್ಷಗಳು ಆಪಾದಿಸುತ್ತಿವೆ. ಒಪ್ಪುತ್ತೀರಾ?

ಸಾಧ್ವಿ ಸಮರ್ಥನೆ ಬಲಪಂಥೀಯ ಹಿಂದೂವಾದದ ಸಮರ್ಥನೆ ಅಲ್ಲ. ‘ಹಿಂದೂ ಭಯೋತ್ಪಾದಕತೆ’ ಎಂಬ ಪದ ಬಳಕೆಯ ಮೂಲಕ ಕಾಂಗ್ರೆಸ್ ವೋಟ್‌ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಹಿಂದೂ ಭಯೋತ್ಪಾದಕತೆ ಎಂಬುದೇ ಇಲ್ಲ. ಹಿಂದೂ ಭಯೋತ್ಪಾದಕತೆ ಇಲ್ಲ ಎಂದು ಎರಡು ನ್ಯಾಯಾಲ ಯಗಳೂ ಹೇಳಿವೆ. ಕಾಂಗ್ರೆಸ್ ಹಿಂದು ಧರ್ಮಕ್ಕೆ ಅವಮಾನ ಮಾಡಲು ಪ್ರಯತ್ನಿಸುತ್ತಿದೆ. ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಿರಪರಾಧಿಯನ್ನು ಬಂಧಿಸಿ, ಅಪರಾಧಿಯನ್ನು ಬಿಡುಗಡೆ ಮಾಡಿತ್ತು. ರಾಹುಲ್ ಗಾಂಧಿ ಇದಕ್ಕೆ ಕ್ಷಮೆ ಕೇಳಬೇಕು

 ಕಾಶ್ಮೀರದಲ್ಲಿ ಬಿಜೆಪಿಯವರು ಆರ್ಟಿಕಲ್ 370 ಮತ್ತು 35 (ಎ)ಯನ್ನು ಮತ್ತಷ್ಟು ಕ್ಲಿಷ್ಟವಾಗಿಸುತ್ತಿದ್ದಾರೆ ಎಂದು ಪಿಡಿಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಆರೋಪಿಸುತ್ತಿವೆ.

ಕಾಶ್ಮೀರದಲ್ಲಿ ಉಗ್ರರು ಆಕ್ರಮಣ ಮಾಡಿದರು. ನಾವು ಪ್ರತೀಕಾರ ತೀರಿಸಿಕೊಂಡೆವು. ಹಾಗಾದರೆ ಈ ವಿಷಯವನ್ನು ಸಂಕೀರ್ಣ ಗೊಳಿಸಿದೆವು ಎಂದರ್ಥವೇ? ಮೋದಿ ಉಗ್ರವಾದದ ವಿರುದ್ಧ ಕಠಿಣ ಹೆಜ್ಜೆ ಇಟ್ಟಿದ್ದಾರೆ.

ಕಳೆದ 5 ವರ್ಷದಲ್ಲಿ ಸಾಕಷ್ಟು ಉಗ್ರರನ್ನು ಸದೆಬಡಿಯಲಾಗಿದೆ. ಫಾರಿನ್ ಟೆರರ್ ಫಂಡಿಂಗ್ ವಿರುದ್ಧ ಎನ್‌ಐಎ ಕಠಿಣ ಕ್ರಮ ಕೈಗೊಂಡಿದೆ. ಜಮಾತ್-ಎ-ಇಸ್ಲಾಮಿ ಮತ್ತು ಜೆಇಎಲ್ ಎಫ್ ಸಂಘಟನೆಯನ್ನು ನಿಷೇಧಿಸಿದ್ದೇವೆ. ಅವುಗಳ ಮುಖಂಡರನ್ನು ಬಂಧಿಸಿದ್ದೇವೆ. ಅದಕ್ಕಿಂತ ಮುಖ್ಯವಾಗಿ ಉಗ್ರವಾದದ ವಿರುದ್ಧ ಏರ್ ಸ್ಟ್ರೈಕ್ ಮತ್ತು ಸರ್ಜಿಕಲ್ ಸ್ಟ್ರೈಕ್ ಕೈಗೊಂಡಿದ್ದೇವೆ. ಆರ್ಟಿಕಲ್ 370 ಮತ್ತು 35 (ಎ) ಕಾಶ್ಮೀರದ ಅಭಿವೃ ದ್ಧಿಗಿರುವ ತಡೆಗೋಡೆಗಳು. ಹಾಗಾಗಿ ಅದು ಕೊನೆಗೊಳ್ಳಲೇ ಬೇಕು.

2019 ರ ಚುನಾವಣೆ, 1972 ರ  ನಂತರ ನಡೆದ ಚುನಾವಣೆಯಂತೆಯೋ ಅಥವಾ 1977 ರ ತುರ್ತು ಪರಿಸ್ಥಿತಿ ನಂತರ ನಡೆದ ಚುನಾವಣೆಯೋ ಅಥವಾ ಭಾರತದಲ್ಲಿ ಎನ್‌ಡಿಎ ಮುನ್ನೆಲೆಗೆ ಬಂದ ನಂತರ (2004) ದ ಚುನಾವಣೆಯಂತೆಯೋ?

ದುರದೃಷ್ಟವಶಾತ್, 60 ರ ದಶಕದಿಂದಲೂ ಭಾರತದಲ್ಲಿ ಚುನಾ ವಣೆಗಳು ಕೆಲವು ವಿಷಯಗಳ ಆಧಾರದಲ್ಲಿ ನಡೆದವು.  ಒಂದು ಚುನಾವಣೆ ಬಾಂಗ್ಲಾದೇಶದ ಯುದ್ಧದ ನೆರಳಿನಲ್ಲಿ ನಡೆದರೆ, ಇನ್ನೊಂದು ತುರ್ತು ಪರಿಸ್ಥಿತಿ ಆಧಾರದಲ್ಲಿ, ಮತ್ತೊಂದು ಕಾರ್ಗಿಲ್ ಆಧಾರದಲ್ಲಿ ನಡೆಯಿತು. ಇದೇ ಮೊದಲ ಬಾರಿಗೆ ಪ್ರಜಾಪ್ರಭುತ್ವದ ಉಳಿವಿಗಾಗಿ ಚುನಾವಣೆಯೊಂದು ನಡೆಯುತ್ತಿದೆ. ಜಾತೀಯತೆ, ಸ್ವಜನಪಕ್ಷಪಾತ, ಓಲೈಕೆಗಳು ಮೂಲೆಗುಂಪಾಗಿ ರಾಜಕೀಯದಲ್ಲಿನ ಸಾಧನೆಗಳು ಚುನಾವಣೆಯ ಮಾನದಂಡವಾಗಿದೆ.

ರಾಷ್ಟ್ರೀಯ ಭದ್ರತೆ ವಿಷಯವನ್ನು ಬಿಜೆಪಿ ಭಾವನಾತ್ಮಕವಾಗಿ ಬಳಸಿಕೊಳ್ಳುತ್ತಿದೆ ಎನ್ನಲಾಗುತ್ತಿದೆ?

ರಾಷ್ಟ್ರೀಯ ಭದ್ರತೆ ಎನ್ನುವುದು ಭಾವನಾತ್ಮಕ ವಿಷಯವಲ್ಲ, ಇದು ವಾಸ್ತವ. ರಾಷ್ಟ್ರೀಯತೆ ಪ್ರಜಾಪ್ರಭುತ್ವದ ಭಾಗ. ಹಾಗಾಗಿ ಇದು ಚುನಾವಣೆಯ ಪ್ರಮುಖ ವಿಷಯ ಎಂದು ನಾನು ಭಾವಿಸುತ್ತೇವೆ. 

ವಾಜಪೇಯಿ ಸರ್ಕಾರ ಮೈತ್ರಿ ಸರ್ಕಾರವಾಗಿತ್ತು. ಆದರೆ ಮೋದಿ ಸರ್ಕಾರ ಸದೃಢವಾಗಿದೆ. ಆದರೂ ವಾಜಪೇಯಿ ಸರ್ಕಾರ ಪೋಖ್ರಾಣ್, ರಾಷ್ಟ್ರೀಯ ಹೆದ್ದಾರಿ, ಟೆಲಿಕಾಂ ಮತ್ತು ಎಲೆಕ್ಟ್ರಿಸಿಟಿ ರಿಫಾರ್ಮ್ ಮುಂತಾದ ಕಾರ‌್ಯಗಳನ್ನು ಮಾಡಿದೆ. ಮೋದಿ ಸರ್ಕಾರ ಏನು ಮಾಡಿದೆ?

ನಾವು ಅಧಿಕಾರಕ್ಕೆ ಬಂದಾಗ ನಮ್ಮ ಆರ್ಥಿಕತೆ 11 ನೇ ಸ್ಥಾನದಲ್ಲಿತ್ತು. ಈಗ 6 ನೇ ಸ್ಥಾನದಲ್ಲಿದ್ದೇವೆ. ಭದ್ರತಾ ವಿಷಯದಲ್ಲೂ ಸಾಕಷ್ಟು ಜಾಗೃ ತರಾಗಿದ್ದೇವೆ. ನೀವು ನಮ್ಮ 5 ವರ್ಷಗಳ ಅವಧಿಯನ್ನು 55 ವರ್ಷಗಳ ಕಾಂಗ್ರೆಸ್ ಸಾಧನೆಯ ಜೊತೆ ಹೋಲಿಕೆ ಮಾಡಿ. ಕಾಂಗ್ರೆಸ್ ಗರೀಬಿ ಹಟಾವೋ ಯೋಜನೆ ಜಾರಿ ಮಾಡಿ, ಕನಿಷ್ಠ ಎಲ್‌ಪಿಜಿ ಸಿಲಿಂಡರ್ ವಿತರಿಸುವಲ್ಲಿ ವಿಫಲವಾಯಿತು.

70 ವರ್ಷದಲ್ಲಿ ಅವರು 13 ಕೋಟಿ ಸಿಲಿಂಡರ್ ವಿತರಿಸಿದರು. ನಾವು 5 ವರ್ಷದಲ್ಲಿ 13 ಕೋಟಿ ಸಿಲಿಂಡರ್ ವಿತರಿಸಿದ್ದೇವೆ. ಇದರಲ್ಲಿ 7 ಕೋಟಿ ಜನರು ಅತಿ ಬಡವರು. ಪ್ರತಿ ಮನೆಗೆ ವಿದ್ಯುತ್ ನೀಡಿದ್ದೇವೆ. ಈಗಾಗಲೇ 98 % ಮನೆಗಳಿಗೆ ವಿದ್ಯುತ್ ಲಭ್ಯವಾಗಿದೆ. ಉಳಿದ 2 % ಜನರಿಗೆ 2022 ರೊಳಗೆ ವಿದ್ಯುತ್ ಲಭ್ಯವಾಗುತ್ತದೆ.

ಪ್ರತಿ ಮನೆಯೂ ಶೌಚಾಲಯ ಹೊಂದಬೇಕೆಂದು ಪ್ರಯತ್ನ ಪಡುತ್ತಿದ್ದೇವೆ. ಜಿಎಸ್‌ಟಿ ಜಾರಿ ಮಾಡಿ ತೆರಿಗೆ ವ್ಯವಸ್ಥೆ ಸರಳಗೊಳಿಸಿದ್ದೇವೆ. 30 ವರ್ಷ ಆಳಿದ ಸರ್ಕಾರ 5 ಪ್ರಮುಖ ನಿರ್ಧಾರ ಕೈಗೊಂಡರೆ, ನಾವು 5 ವರ್ಷದಲ್ಲಿ 30 ಪ್ರಮುಖ ನಿರ್ಧಾರ ಕೈಗೊಂಡಿದ್ದೇವೆ

ಅಮಿತ್ ಶಾ ಅವರ 2019 ರ ಪ್ರಚಾರಕ್ಕೂ 2014 ರ ಪ್ರಚಾರಕ್ಕೂ ಏನು ವ್ಯತ್ಯಾಸ?

2014 ರ ಚುನಾವಣೆ ಮೋದಿ ಹೆಸರಿನಲ್ಲಿ ನಡೆಯಿತು. ಈಗ ಮೋದಿ ಹೆಸರು ಮತ್ತು ಅವರ ಕಾರ‌್ಯದ ಮೇಲೆ ನಡೆಯುತ್ತಿದೆ. 2014 ರಲ್ಲಿ ಮೋದಿ ಅವರ ಮೇಲೆ ನಂಬಿಕೆ, ವಿಶ್ವಾಸವಿತ್ತು. ಈ ಬಾರಿ ಜನರು ಅವರ ಮೇಲೆ ವಿಶ್ವಾಸ ಮತ್ತು ನಿರೀಕ್ಷೆ ಇಟ್ಟಿದ್ದಾರೆ.

ಪ್ರತಿಯೊಬ್ಬ ಬಿಜೆಪಿ ಬೆಂಬಲಿಗರೂ ಮೋದಿ, ಮೋದಿ, ಮೋದಿ ಎನ್ನುತ್ತಿದ್ದಾರೆ. ನೀವೂ ಸೇರಿದಂತೆ ಎಲ್ಲಾ ಪ್ರಚಾರಕರೂ ಮೋದಿ ಮೋದಿ ಎನ್ನುತ್ತಿದ್ದಾರೆ. ಇಂತಹ ಹೊಗಳುಭಟ್ಟಂಗಿತನ ಏಕೆ?

ಕಾಂಗ್ರೆಸ್ ರಾಹುಲ್, ರಾಹುಲ್, ರಾಹುಲ್ ಎಂದು ಪಠಿಸುತ್ತಿದೆ. ಆ ವೋಟುಗಳೆಲ್ಲ ಎಲ್ಲಿ? ಜನರು ವ್ಯಕ್ತಿ ಮಾಡಿದ ಕೆಲಸವನ್ನು ನೋಡಿ ಮತ ಹಾಕುತ್ತಾರೆ. ಮೋದಿ ಎಂಬ ಹೆಸರಿನ ಹಿಂದೆ ಶ್ರಮ, ಕೆಲಸ ಅಡಗಿದೆ. ಆ ಹೆಸರಿನ ಹಿಂದೆ ನಂಬಿಕೆ ಇದೆ. ನೀವು ಇದನ್ನೆಲ್ಲಾ ಬಿಟ್ಟು ಕೇವಲ ಹೆಸರಿನ ಮೇಲೆ ಗಮನ ಕೇಂದ್ರೀಕರಿಸಿದ್ದೀರಿ.

ಮೋದಿ ಹೆಸರಿನ ಮೇಲೆ ಮಾರ್ಕೆಟಿಂಗ್ ಮಾಡುತ್ತಿಲ್ಲ. ಮೋದಿ ಈ ದೇಶದ ಬಡತನ ನಿವಾರಣೆಯ ಚಿಹ್ನೆ, ರಾಷ್ಟ್ರೀಯತೆಯನ್ನು ಕಟ್ಟುವ ಚಿಹ್ನೆ, ದೇಶವನ್ನು ಸುಭದ್ರಗೊಳಿಸುವ ಚಿಹ್ನೆ. ನಾವದನ್ನು ಹೇಳಲೇಬೇಕು. ಜನರು ಇದನ್ನು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬುದು ಮೇ 23 ರಂದು ಸ್ಪಷ್ಟವಾಗುತ್ತದೆ.