ಶಿಂಧೆ ವಿರುದ್ಧ ಬಿಜೆಪಿಯಿಂದ ಲಿಂಗಾಯತ ಸ್ವಾಮೀಜಿ ಕಣಕ್ಕೆ| ಸೊಲ್ಲಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಗ್ ಫೈಟ್| 3.5 ಲಕ್ಷ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟ ಬಿಜೆಪಿ| ಅಂಬೇಡ್ಕರ್ ಮೊಮ್ಮಗ ಕೂಡ ಇಲ್ಲಿ ಸ್ಪರ್ಧಿ
ಸೊಲ್ಲಾಪುರ[ಮಾ.27]: ಕರ್ನಾಟಕದ ಗಡಿಭಾಗಕ್ಕೆ ಹೊಂದಿಕೊಂಡಿರುವ ಹಾಗೂ ಸಾಕಷ್ಟುಕನ್ನಡಿಗ ಜನಸಂಖ್ಯೆ ಇರುವ ಮಹಾರಾಷ್ಟ್ರದ ಸೊಲ್ಲಾಪುರ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಸ್ವಾಮೀಜಿಯೊಬ್ಬರಿಗೆ ಬಿಜೆಪಿ ಅಚ್ಚರಿಯ ರೀತಿಯಲ್ಲಿ ಟಿಕೆಟ್ ನೀಡಿದೆ. ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಮಂತ್ರಿ ಸುಶೀಲ್‌ಕುಮಾರ್ ಶಿಂಧೆ ಅವರಂಥ ಘಟಾನುಘಟಿಯನ್ನು ಎದುರಿಸಲಿದ್ದಾರೆ.
ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಕೂಡ ವಂಚಿತ ಬಹುಜನ ಅಘಾಡಿ ಪಕ್ಷದಿಂದ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ತ್ರಿಕೋನ ಸ್ಪರ್ಧೆ ನಿರೀಕ್ಷಿಸಲಾಗಿದೆ.
ಬಿಜೆಪಿಯ ಹಾಲಿ ಸಂಸದ ಶರದ್ ಬನಸೋಡೆ ಅವರಿಗೆ ಟಿಕೆಟ್ ನಿರಾಕರಿಸಿ ಅಕ್ಕಲಕೋಟ ತಾಲೂಕು ಗೌಡಗಾಂವ್‌ನಲ್ಲಿ ಮಠ ಹೊಂದಿರುವ ಜಯಸಿದ್ದೇಶ್ವರಿಗೆ ಟಿಕೆಟ್ ನೀಡಲಾಗಿದೆ. ಸೊಲ್ಲಾಪುರ ಲೋಕಸಭಾ ಕ್ಷೇತ್ರದ ಸೊಲ್ಲಾಪುರ ದಕ್ಷಿಣ, ಸೊಲ್ಲಾಪುರ ಉತ್ತರ ಹಾಗೂ ಅಕ್ಕಲಕೋಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಲಿಂಗಾಯತ ಸಮುದಾಯ ಪ್ರಬಲವಾಗಿದ್ದು, 3.5 ಲಕ್ಷ ಲಿಂಗಾಯತ ಮತದಾರರಿದ್ದಾರೆ. ಅವರು ಸ್ವಾಮೀಜಿ ಬೆನ್ನ ಹಿಂದೆ ನಿಲ್ಲಬಹುದು ಎಂದು ಬಿಜೆಪಿ ಲೆಕ್ಕಾಚಾರ. ‘ಆದರೆ ಶ್ರೀಗಳಾದವರು ಚುನಾವಣೆ ಸ್ಪರ್ಧಿಸಬಾರದು’ ಎಂದು ವಾದಿಸುವ ಲಿಂಗಾಯತರ ಗುಂಪೊಂದಿದೆ.
ಇನ್ನು ಶಿಂಧೆ ಅವರು ದಲಿತ, ಅಲ್ಪಸಂಖ್ಯಾತ ಹಾಗೂ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತ ನೆಚ್ಚಿಕೊಂಡಿದ್ದಾರೆ. ಆದರೆ ಪ್ರಕಾಶ್ ಅಂಬೇಡ್ಕರ್ ಅವರು ಅಸಾದುದ್ದೀನ್ ಒವೈಸಿ ಅವರ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಬೆಂಬಲದೊಂದಿಗೆ ಸ್ಪರ್ಧಿಸುತ್ತಿದ್ದು, ಅವರು ಶಿಂಧೆ ಅವರ ಮುಸ್ಲಿಂ, ದಲಿತ ಮತಗಳಿಗೆ ಕೈಹಾಕುವ ಸಾಧ್ಯತೆ ಇದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 27, 2019, 12:45 PM IST