ಲಕ್ನೋ(ಮಾ.27): ಪ್ರಧಾನಿ ನರೇಂದ್ರ ಮೋದಿ ಅವರ #MainBhiChowkidar ಅಭಿಯಾನಕ್ಕೆ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ. ಆದರೆ ಇದು ಕೆಲವೊಮ್ಮೆ ಅವರಿಗೇ ತಿರುಗುಬಾಣವಾಗಿದ್ದೂ ಇದೆ.

ಅದರಂತೆ ಉತ್ತರಪ್ರದೇಶದ ಬಿಜೆಪಿ ಸಂಸದನೋರ್ವ ಪಕ್ಷಕ್ಕೆ ರಾಜೀನಾಮೆ ನೀಡಿದ್ದಲ್ಲದೇ, ರಾಜೀನಾಮೆ ಪತ್ರವನ್ನು ಪಕ್ಷದ ಕಚೇರಿಯ ಕಾವಲುಗಾರನಿಗೆ ನೀಡಿ ಗಮನ ಸೆಳೆದಿದ್ದಾರೆ.

ಬಿಜೆಪಿ ಸಂಸದ ಅನ್ಶುಲ್ ವರ್ಮಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, 2019ರ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನಿಂದ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶ ಹರ್ದೋಯಿ ಲೋಕಸಭಾ ಕ್ಷೇತ್ರದಿಂದ ಅನ್ಶುಲ್ ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು.

ಆದರೆ ರಾಜೀನಾಮೆಗೂ ಮುನ್ನ ಆನ್ಶುಲ್ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ಕಚೇರಿಯ ಕಾವಲುಗಾರನಿಗೆ ನೀಡಿ ಪ್ರಧಾನಿ ಮೋದಿ ಅವರ #MainBhiChowkidar ಅಭಿಯಾನವನ್ನು ವ್ಯಂಗ್ಯ ಮಾಡಿದ್ದಾರೆ.

ಅನ್ಶುಲ್ ವರ್ಮಾ ಅವರಿಗೆ ಟಿಕೆಟ್ ನಿರಾಕರಿಸಿ ಬಿಜೆಪಿ ಈ ಬಾರಿ ಜಯಪ್ರಕಾಶ್ ರಾವತ್ ಎಂಬುವವರಿಗೆ ಟಿಕೆಟ್ ನೀಡಿತ್ತು. ಇದನ್ನು ಖಂಡಿಸಿ ಪಕ್ಷ ತೊರೆದಿರುವ ಅನ್ಶುಲ್ ವರ್ಮಾ, ಸಮಾಜವಾದಿ ಪಕ್ಷ ಸೇರಿದ್ದಾರೆ.