ಶಿವಮೊಗ್ಗ, (ಏ.11):  ಶಿವರಾಜ್ ಕುಮಾರ್ ತಮ್ಮ ಅಭಿನಯದ 'ಕವಚ' ಚಿತ್ರದ ಪ್ರಚಾರ ಹೆಸರಿನಲ್ಲಿ ಕವಚ ಹಾಕಿಕೊಂಡು ರಾಜಕೀಯ ಮಾಡಲು ಶಿವಮೊಗ್ಗಕ್ಕೆ ಬಂದಿದ್ದಾರೆ ಎಂದು ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಕಿಡಿಕಾರಿದ್ದಾರೆ.

 ಇಂದು (ಗುರುವಾರ) ಶಿವಮೊಗ್ಗದಲ್ಲಿ  ಮಾತನಾಡಿದ ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ,  'ಶಿವರಾಜ್‌ಕುಮಾರ್‌ಗೆ ರಾಜಕೀಯ ಮಾಡುವ ಆಸೆ ಇದ್ದರೆ ಧರಿಸಿರುವ ಕವಚ ತೆಗೆದಿಟ್ಟು ರಾಜಕೀಯ ಮಾಡಲಿ. ಅದು ಬಿಟ್ಟು ಸಿನಿಮಾವನ್ನು ಮುಂದಿಟ್ಟುಕೊಂಡು ಅದರ ಪ್ರಚಾರ ಮಾಡುತ್ತೇನೆಂದು ರಾಜಕೀಯ ಪ್ರಚಾರ ಮಾಡುವುದು ಬೇಡ' ಎಂದು ನಟ ಶಿವರಾಜ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜಕಾರಣಕ್ಕೆ ತುಂಬಾ ಬುದ್ಧಿ ಬೇಕು: ಶಿವಣ್ಣ ಹೇಳಿಕೆ ಹಿಂದಿನ ಸತ್ಯ!

ಚುನಾವಣೆ ಸಮೀಪಿಸುತ್ತಿದ್ದಂತೆ  ಗೀತಾ ಹಾಗೂ ಶಿವರಾಜಕುಮಾರ್ ಇವರಿಬ್ಬರು ಕ್ಷೇತ್ರದಲ್ಲಿ ಪ್ರತ್ಯಕ್ಷರಾಗುತ್ತಾರೆ. ಆನಂತರ ಅವರು ಕ್ಷೇತ್ರದಲ್ಲಿ ಕಾಣಸಲ್ಲ. ಇದೀಗ ಮಧು ಬಂಗಾರಪ್ಪ ಪರ ಪ್ರಚಾರಕ್ಕೆ ಆಗಮಿಸಿದ್ದಾರೆ.

ರಾಜಕುಮಾರ್ ಕುಟುಂಬ ರಾಜಕೀಯದಲ್ಲಿ ಇಲ್ಲ ಅಂತ ಹೇಳ್ತಾರೆ. ಆದರೆ, ಇಲ್ಲಿ ಪ್ರಚಾರಕ್ಕೆ ಬರ್ತಾರೆ ಎಂದು ಕುಮಾರ್ ಬಂಗಾರಪ್ಪ ಕಿಡಿಕಾರಿದರು.

ರಾಜಕೀಯದಲ್ಲಿ ದ್ವೇಷವಿಟ್ಟುಕೊಂಡು ಹೇಳಿಕೆ ನೀಡಬಾರದು ಎಂದು ಚಿತ್ರನಟ ಶಿವರಾಜ್ ಕುಮಾರ್ ಹೇಳಿಕೆ ನೀಡಿದ್ದಾರೆ. ಒಮ್ಮೆ ಮಂಡ್ಯಕ್ಕೆ ಹೋಗಿ ಅಲ್ಲಿನ ರಾಜಕೀಯ ನೋಡಲಿ. ಆಗ ಯಾರು ದ್ವೇಷ ಮಾಡುತ್ತಿದ್ದಾರೆ ಎಂಬುದು ಶಿವರಾಜ್ ಕುಮಾರ್‌ಗೆ ಅರಿವಾಗುತ್ತದೆ ಎಂದರು.