ಭೋಪಾಲ್[ಏ.21]: ಮಧ್ಯ ಪ್ರದೇಶದ ಭೋಪಾಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ 'ನನ್ನ ಶಬ್ಧಕೋಶದಲ್ಲಿ ಹಿಂದುತ್ವ ಎಂಬ ಪದವೇ ಇಲ್ಲ' ಎಂಬ ಹೇಳಿಕೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಿಂಗ್ ರಿಗೆ ಹಿಂದುತ್ವ ವಿಚಾರದಲ್ಲಿ ಚುನಾವಣೆಯಲ್ಲಿ ಮತ ಹಂಚಿಕೆಯಾಗುತ್ತದೆ ಎಂದು ನಿಮಗನಿಸುತ್ತದೆಯೇ ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ ಈ ಹೇಳಿಕೆ ನೀಡಿದ್ದಾರೆ. ಅಲ್ಲದೇ ನೀವೇಕೆ ಹಿಂದುತ್ವ ಎಂಬ ಪದ ಬಳಕೆ ಮಾಡುತ್ತಿದ್ದೀರಿ ಎಂದು ಮರು ಪ್ರಶ್ನೆ ಎಸೆದಿದ್ದಾರೆ.

ಬಳಿಕ ತಮ್ಮ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿರುವ ದಿಗ್ವಿಜಯ್ ಸಿಂಗ್ 'ಸಾವಿರಾರು ವರ್ಷಗಳಿಂದ ಜಗತ್ತಿಗೆ ಜೀವನ ನಡೆಸುವ ದಾರಿ ತೋರಿಸಿಕೊಂಡು ಬಂದಿರುವ ಹಿಂದೂ ಧರ್ಮವನ್ನು ನಾನು ನಂಬುತ್ತೇನೆ. ಆದರೆ ನಾನು ನನ್ನ ಧರ್ಮವನ್ನು ರಾಜಕೀಯ ಹಾಗೂ ಅಧಿಕಾರ ಪಡೆಯಲು ಸಂಘ ರೂಪಿಸಿರುವ ಹಿಂದುತ್ವ ಎಂಬ ಷಡ್ಯಂತ್ರದ ಅಡಿಯಾಳಾಗಲು ಬಿಡುವುದಿಲ್ಲ. ವಸುದೈವ ಕುಟುಂಬಕಂ ಎಂಬ ಸಂದೇಶ ಸಾರುವ ನನ್ನ ಸನಾತನ ಹಿಂದೂ ಧರ್ಮದ ಮೇಲೆ ನನಗೆ ಅತಿಯಾದ ಗೌರವ ಇದೆ. ಸಂಘದ ಹಿಂದುತ್ವ ಒಂದಾಗಿಸುವುದಿಲ್ಲ ಅದು ಜನರನ್ನು ಒಡೆಯುತ್ತದೆ. ನನ್ನ ಧರ್ಮವನ್ನು ರಾಜಕೀಯ ಅಪಹರಣವಾಗಲು ನಾನೆಂದೂ ಬಿಡುವುದಿಲ್ಲ. ನನಗೆ ಹಿಂದೂ ಧರ್ಮ ಎಂಬುವುದುವುದು ನಂಬಿಕೆಯ ವಿಚಾರ' ಎಂದಿದ್ದಾರೆ.

'ನನ್ನ ಹಿಂದೂ ಧರ್ಮ ನನ್ನ ನಂಬಿಕೆ. ಇದೇ ಕರಣದಿಂದ ನಾನು ಕೈಗೊಂಡ ನರ್ಮದಾ ಯಾತ್ರೆಯನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡಿಲ್ಲ. ರಾಘೋಗಢ ಮಂದಿರಗಳ ಪರಂಪರೆಯ ಪ್ರಚಾರ ನಡೆಸಿಲ್ಲ. ಪಂಡರ್ಪುರ ದರ್ಶನ ಕುರಿತಾಗಿ ಉಲ್ಲೇಖಿಸಿಲ್ಲ. ಹೀಗಿರುವಾಗ ನನ್ನ ಹಾಗೂ ಬಿಜೆಪಿಗರು ನನ್ನ ಹಾಗೂ ಭಗವಂತನ ನಡುವೆ ಏಕೆ ಬಂದರು? ಅವರು ಯಾವಾಗಿಂದ ಸರ್ಟಿಫಿಕೇಟ್ ಕೊಡುವ ಏಜೆಂಟ್ ಗಳಾದರು?' ಎಂದು ಪ್ರಶ್ನಿಸಿದ್ದಾರೆ.