ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ವೇಳೆ ರಾಷ್ಟ್ರೀಯ ಪಕ್ಷಗಳು ಅಬ್ಬರದಲ್ಲಿ ಪ್ರಚಾರ ನಡೆಸುತ್ತಿವೆ. ಬಿಜೆಪಿ ಫಿರ್‌ ಏಕ್‌ ಬಾರ್‌ ಮೋದಿ ಸರ್ಕಾರ್‌’ (ಮತ್ತೊಮ್ಮೆ ಮೋದಿ ಸರ್ಕಾರ) ಎಂಬ ಮುಖ್ಯ ಚುನಾವಣಾ ಪ್ರಚಾರ ಧ್ಯೇಯಗೀತೆ ಸೇರಿದಂತೆ 4 ಧ್ಯೇಯಗೀತೆಗಳನ್ನು ಬಿಡುಗಡೆ ಮಾಡಿದೆ.

ನವದೆಹಲಿ : ಅತ್ತ ಕಾಂಗ್ರೆಸ್‌ ಪಕ್ಷ ‘ಅಬ್‌ ಹೋಗಾ ನ್ಯಾಯ್‌’ ಎಂಬ ಘೋಷವಾಕ್ಯದ ಅಡಿ ಲೋಕಸಭಾ ಚುನಾವಣೆಗಾಗಿ ಹೋಗುವುದಾಗಿ ಘೋಷಿಸಿದ ಬೆನ್ನಲ್ಲೇ ಇತ್ತ ‘ಫಿರ್‌ ಏಕ್‌ ಬಾರ್‌ ಮೋದಿ ಸರ್ಕಾರ್‌’ (ಮತ್ತೊಮ್ಮೆ ಮೋದಿ ಸರ್ಕಾರ) ಎಂಬ ಮುಖ್ಯ ಚುನಾವಣಾ ಪ್ರಚಾರ ಧ್ಯೇಯಗೀತೆ ಸೇರಿದಂತೆ 4 ಧ್ಯೇಯಗೀತೆಗಳನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಇದೇ ವೇಳೆ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ‘ಜನರು ಇಂದು 2 ತಂಡಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಒಂದು ತಂಡದಲ್ಲಿ 11 ಜನರು ಇದ್ದು, ಅದಕ್ಕೆ ಒಬ್ಬ ಕ್ಯಾಪ್ಟನ್‌ ಇದ್ದಾನೆ. ಆದರೆ ಇನ್ನೊಂದು ತಂಡದಲ್ಲಿ ಬರೀ 40 ಕ್ಯಾಪ್ಟನ್‌ಗಳು ಇದ್ದಾರೆ’ ಎಂದು ಯಾವುದೇ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ವಿಫಲವಾಗಿರುವ ಪ್ರತಿಪಕ್ಷಗಳನ್ನು ಛೇಡಿಸಿದೆ.

ಧ್ಯೇಯಗೀತೆಗಳನ್ನು ಭಾನುವಾರ ಸಂಜೆ ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಸಚಿವ ಅರುಣ್‌ ಜೇಟ್ಲಿ, ‘ಜನರು ಇಂದು ಪ್ರಧಾನಿ ಮೋದಿ ಎಂಬ ನಿರ್ಣಾಯಕ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಅಥವಾ ‘ಗೊಂದಲ ಮತ್ತು ಕಲಬೆರಕೆ ಮೈತ್ರಿಕೂಟವನ್ನು ಆಯ್ಕೆ ಮಾಡಿಕೊಳ್ಳಬೇಕು. ಮೊದಲ ತಂಡದಲ್ಲಿ ಒಬ್ಬ ನಾಯಕ ಮತ್ತು 11 ಆಟಗಾರರು ಇದ್ದಾರೆ. ಇನ್ನೊಂದು ತಂಡದಲ್ಲಿ ಆಟಗಾರರಿಲ್ಲ. ಬದಲಾಗಿ 40 ಕಪ್ತಾನರಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಜೇಟ್ಲಿ ಬಿಡುಗಡೆ ಮಾಡಿದ 4 ಧ್ಯೇಯಗೀತೆಗಳಲ್ಲಿ ಮುಖ್ಯ ಧ್ಯೇಯಗೀತೆ ‘ಫಿರ್‌ ಏಕ್‌ ಬಾರ್‌ ಮೋದಿ ಸರ್ಕಾರ್‌’ ಎಂಬ ಹಾಡು ಒಳಗೊಂಡಿದೆ. ಇನ್ನುಳಿದ ಮೂರು ಗೀತೆಗಳು ಮೋದಿ ಸರ್ಕಾರದ ಸಾಧನೆಗಳನ್ನು ಹೇಳುತ್ತವೆ. ‘ಕಾಮ್‌ ಕರ್ನೇ ವಾಲಿ ಸರ್ಕಾರ್‌ (ಕೆಲಸ ಮಾಡುವ ಸರ್ಕಾರ), ‘ಇಮಾನ್‌ದಾರ್‌ ಸರ್ಕಾರ್‌’ (ಪ್ರಾಮಾಣಿಕ ಸರ್ಕಾರ) ಹಾಗೂ ‘ಫೈಸ್ಲೇ ಲೇನೇ ವಾಲಿ ಸರ್ಕಾರ್‌’ (ನಿರ್ಣಾಯಕ ಸರ್ಕಾರ) ಎಂಬುವೇ ಆ ಇತರ ಮೂರು ಗೀತೆಗಳು.

‘ಫಿರ್‌ ಏಕ್‌ ಬಾರ್‌ ಮೋದಿ ಸರ್ಕಾರ್‌’ ಗೀತೆಯ ಬಗ್ಗೆ ವಿವರಣೆ ನೀಡಿದ ಜೇಟ್ಲಿ, ‘ದೇಶದ ಭದ್ರತಾ ಕ್ಷೇತ್ರಕ್ಕೆ ನೀಡಿದ ಕೊಡುಗೆ, ಪ್ರಾಮಾಣಿಕತೆ, ದೊಡ್ಡ ನಿರ್ಣಯಗಳನ್ನು ಕೈಗೊಳ್ಳುವ ಸಾಮರ್ಥ್ಯ- ಇತ್ಯಾದಿ ಮೋದಿ ಅವರ 5 ವರ್ಷದ ಸಾಧನೆಗಳನನ್ನು ಮುಖ್ಯ ಧ್ಯೇಯಗೀತೆ ವರ್ಣಿಸುತ್ತದೆ. ಇದೇ ಕಾರಣ ಮುಂದೆ ಮೋದಿ ಸರ್ಕಾರವನ್ನೇ ಚುನಾಯಿಸಬೇಕು ಎಂದು ಕೋರುತ್ತದೆ’ ಎಂದರು.