ಬೆಂಗಳೂರು[ಮಾ.19]: ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಪ್ರಧಾನಿ ನರೇಂದ್ರ ಮೋದಿ ಅವರೇ ನಮ್ಮ ಅಭ್ಯರ್ಥಿ ಎಂಬ ಗುರಿಯೊಂದಿಗೆ ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಸ್ಥಾನದ ಜವಾಬ್ದಾರಿ ವಹಿಸಿಕೊಂಡಿರುವ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಇದೀಗ ಮೈಚಳಿ ಬಿಟ್ಟು ಚುನಾವಣೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದರಿಂದ ಹಿಡಿದು ಅಂತಿಮವಾಗಿ ಮತದಾನದವರೆಗೂ ಯಾವುದೇ ತೊಂದರೆಯಾಗದಂತೆ ನೆರವು ನೀಡುವ ಹೊಣೆಯನ್ನು ಸಮಿತಿಗೆ ನೀಡಲಾಗಿದೆ

ಪಕ್ಷದ ಪ್ರಚಾರ, ಪ್ರಧಾನಿ ಮೋದಿ ಅವರ ಸಮಾವೇಶಗಳ ಉಸ್ತುವಾರಿಯನ್ನೂ ಅವರ ಹೆಗಲಿಗೇ ವಹಿಸಿರುವುದರಿಂದ ಅಶೋಕ್ ಅವರು ಅತ್ಯುತ್ಸಾಹದಿಂದ ರಾಜ್ಯದಲ್ಲಿ ಸಂಚರಿಸತೊಡಗಿದ್ದಾರೆ. ಪ್ರಚಾರದ ಸಿದ್ಧತೆಯ ಬಿಡುವಿನ ವೇಳೆ ಅವರು ‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವಾರು ವಿಷಯಗಳು, ಬೆಳವಣಿಗೆಗಳನ್ನು ಹಂಚಿಕೊಂಡಿದ್ದಾರೆ. ಸಂದರ್ಶನದ ಪೂರ್ಣಪಾಠ ಹೀಗಿದೆ:

ಈ ಬಾರಿಯ ಚುನಾವಣೆ ಬಿಜೆಪಿಗೆ ಯಾಕೆ ಮುಖ್ಯ?

ಹಿಂದೆ ವಾಜಪೇಯಿ ಅವರು ಪ್ರಧಾನಿ ಯಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ನಂತರ ನಡೆದ ಚುನಾವಣೆಯಲ್ಲಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲಿಲ್ಲ. ಈಗ ಹಾಗಾಗಬಾರದು. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದು ತಪ್ಪಬಾರದು ಎಂಬ ಕಾರಣಕ್ಕಾಗಿ ಇದು ಮುಖ್ಯವಾದ ಚುನಾವಣೆ ಎಂದು ಭಾವಿಸಿ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ.

ಯಾವ ವಿಷಯಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಮತ ಯಾಚಿಸುತ್ತೀರಿ?

ದೇಶದ ಭದ್ರತೆ, ಮೋದಿ ಅವರ ನೇತೃತ್ವದ ಸರ್ಕಾರದ ಸಾಧನೆಗಳು ಮುಂದಿಟ್ಟುಕೊಂಡು ಮತ ಯಾಚಿಸುತ್ತೇವೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದೇ ನಮ್ಮ ಮುಖ್ಯ ಅಜೆಂಡಾ.

ಜೆಡಿಎಸ್‌ನಲ್ಲಿ ದೇವೇಗೌಡರ ಕುಟುಂಬದ ಮೂರನೇ ತಲೆಮಾರು ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದೆ?

ಯಾವುದೇ ಆಗಲಿ, ಅತಿಯಾಗಿ ತಿಂದರೆ ಅಜೀರ್ಣವಾಗುತ್ತದೆ. ಇದೂ ಅದೇ ರೀತಿ. ಅಪ್ಪ ಮಕ್ಕಳು ರಾಜಕಾರಣದಲ್ಲಿದ್ದರು. ಆದರೆ, ಒಂದು ಕುಟುಂಬದಿಂದ ಏಳೆಂಟು ಮಂದಿ ಕಣಕ್ಕಿಳಿಯುವುದು ಸರಿಯಲ್ಲ. ಇದೊಂದು ಹೇಸಿಗೆ ರಾಜಕಾರಣ. ಈ ಕುಟುಂಬ ರಾಜಕಾರಣವೇ ಜೆಡಿಎಸ್‌ಗೆ ಮುಳುವಾಗುತ್ತದೆ. ಕಾದು ನೋಡಿ.

ಮೋದಿ ಅಲೆಯಿಂದಾಗಿಯೇ ರಾಜ್ಯ ಬಿಜೆಪಿ ಸಂಘಟನೆಯಲ್ಲಿನ ಲೋಪದೋಷಗಳು ಮುಚ್ಚಿ ಹೋಗಿವೆಯಂತೆ?

ಆ ಥರ ಏನೂ ಇಲ್ಲ. ದೇಶಾದ್ಯಂತ ಮೋದಿ ಅವರ ಅಲೆ ಇರುವುದು ನಿಜ. ಯಾವುದೇ ಒಂದು ಅಲೆ ಸೃಷ್ಟಿಯಾದಾಗ ಅದರಲ್ಲಿ ಸಣ್ಣ ಪುಟ್ಟ ಅಂಶಗಳು ಮುಚ್ಚಿ ಹೋಗುತ್ತವೆ. ಆದರೆ, ಪಕ್ಷದ ರಾಜ್ಯ ಘಟಕದಲ್ಲಿ ಹೇಳಿಕೊಳ್ಳುವಂಥ ದೊಡ್ಡ ಸಮಸ್ಯೆಗಳು ಏನೂ ಇಲ್ಲ.

ರಾಜ್ಯ ಬಿಜೆಪಿ ನಾಯಕರ ನಡುವಿನ ತಿಕ್ಕಾಟದ ಬಗ್ಗೆ ಸ್ವತಃ ಅಮಿತ್ ಶಾ ಅವರೇ ಕಳೆದ ಬಾರಿ ಆಗಮಿಸಿದ್ದ ವೇಳೆ ಬೇಸರ ವ್ಯಕ್ತಪಡಿಸಿದ್ದಾರಂತೆ?

ಅಮಿತ್ ಶಾ ಅವರು ರಾಜ್ಯ ನಾಯಕರ ನಡುವೆ ತಿಕ್ಕಾಟವಿದೆ ಎಂಬುದನ್ನು ಯಾವತ್ತೂ ಹೇಳಿಲ್ಲ. ಇತರ ಪಕ್ಷಗಳಿಗೆ ಹೋಲಿಸಿದರೆ ನಮ್ಮಲ್ಲಿ ಗೊಂದಲ ತೀರಾ ಕಡಮೆ. ನಮ್ಮದು ಸೈದ್ಧಾಂತಿಕವಾಗಿ ಬೆಳೆದು ಬಂದಿರುವ ಪಕ್ಷ. ಸಣ್ಣ ಪುಟ್ಟ ಸಮಸ್ಯೆಗಳು ಉದ್ಭವಿಸಿದರೂ ಅವುಗಳನ್ನು ಅಲ್ಲಲ್ಲೇ ಬಗೆಹರಿಸಿಕೊಂಡು ಮುಂದೆ ಸಾಗುತ್ತೇವೆ. ನಾವೆಲ್ಲ ರಾಜ್ಯ ನಾಯಕರು ಒಟ್ಟಾಗಿದ್ದೇ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ನಾಯಕರ ನಡುವಿನ ಗೊಂದಲದಿಂದಾಗಿಯೇ ಟಿಕೆಟ್ ಹಂಚಿಕೆಯಲ್ಲಿ ಏರುಪೇರಾಯಿತು. ಪರಿಣಾಮ ಹೆಚ್ಚು ಸ್ಥಾನ ಗಳಿಸಿದರೂ ಅಧಿಕಾರದಿಂದ ದೂರ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತಲ್ಲವೇ?

ನಿಜ. ಸ್ವಲ್ಪ ಮುಂಚೆಯೇ ಟಿಕೆಟ್ ಘೋಷಿಸಬೇಕಾಗಿತ್ತು. 15ರಿಂದ 20 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಯ ಕೊನೆಯ ದಿನದಂದು ಬಿ ಫಾರಂ ನೀಡಿದ್ದೇವೆ. ಕೆಲವು ಗೊಂದಲ, ಪ್ರಚಾರದ ಕುರಿತ ಮಾಹಿತಿ ಕೊರತೆಯಿಂದಾಗಿ ಸ್ವಲ್ಪ ಹೆಚ್ಚೂ ಕಡಮೆ ಆಯಿತು.

ಈ ಬಾರಿಯ ಲೋಕಸಭಾ ಚುನಾವಣೆಗೆ ಬಿಜೆಪಿ ಕಡೆಯಿಂದ ಸಿದ್ಧತೆ ವಿಳಂಬವಾಯಿತಲ್ಲ?

ಇಲ್ಲ. ಕಾಂಗ್ರೆಸ್- ಜೆಡಿಎಸ್‌ಗೆ ಹೋಲಿಸಿದರೆ ನಾವು ತುಂಬಾ ಮುಂದೆ ಇದ್ದೇವೆ. ಈಗಾಗಲೇ ಅಭ್ಯರ್ಥಿಗಳ ಘೋಷಣೆಗೂ ಮುನ್ನವೇ ಅನೇಕ ಕ್ಷೇತ್ರಗಳಲ್ಲಿ ಪಕ್ಷದ ಚುನಾವಣಾ ಕಚೇರಿಗಳನ್ನು ತೆರೆದಿದ್ದೇವೆ. ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರವೂ ಆರಂಭವಾಗಿದೆ.

ಇನ್ನೂ ಅಭ್ಯರ್ಥಿಗಳು ಯಾರು ಎಂಬುದನ್ನೇ ಘೋಷಣೆ ಮಾಡದಿರುವುದರಿಂದ ಪ್ರಚಾರ ಹೇಗೆ?

ನಾವು ತಾಲೂಕು ಕೇಂದ್ರಗಳು ಸೇರಿದಂತೆ ಗ್ರಾಮೀಣ ಭಾಗದಲ್ಲಿ ಪಕ್ಷದ ಪರ ಪ್ರಚಾರ ಶುರು ಮಾಡಿದ್ದೇವೆ. ಸುಮಾರು ಎಲ್‌ಸಿಡಿ ಸ್ಕ್ರೀನ್‌ಗಳನ್ನು ಒಳಗೊಂಡ ೧೭ ವಾಹನಗಳನ್ನು ಈಗಾಗಲೇ ವಿವಿಧ ಲೋಕಸಭಾ ಕ್ಷೇತ್ರಗಳಿಗೆ ಕಳುಹಿಸಿದ್ದೇವೆ. ನಾವು ಅಭ್ಯರ್ಥಿಗಳ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿಲ್ಲ. ಯಾರಾದರೂ ಅಭ್ಯರ್ಥಿಗಳಾಗಲಿ. ಪ್ರಧಾನಿ ಮೋದಿ ಅವರೇ ನಮ್ಮ ಅಭ್ಯರ್ಥಿ. ರಾಜ್ಯಾದ್ಯಂತ ಪಕ್ಷದ ಪ್ರಚಾರದ ಹೊಣೆ ಹೊತ್ತಿರುವ ನಮ್ಮ ಚುನಾವಣಾ ನಿರ್ವಹಣಾ ಸಮಿತಿ ವತಿಯಿಂದ ಮೋದಿ ಅವರೇ ನಮ್ಮ ಅಭ್ಯರ್ಥಿ ಎಂದೇ ಪ್ರಚಾರ ಆರಂಭಿಸಿದ್ದೇವೆ

ಅನಂತಕುಮಾರ್ ಅವರ ಅಗಲಿಕೆ ಈ ಚುನಾವಣೆಯಲ್ಲಿ ಕಾಡುತ್ತಿದೆಯೇ?

ದೊಡ್ಡ ನೋವು ಅನುಭವಿಸುತ್ತಿರುವುದು ನಾನು. ಅನಂತಕುಮಾರ್ ಅವರು ಇಲ್ಲದ ಚುನಾವಣೆಯಲ್ಲಿ ನಾನು ಕೆಲಸ ಮಾಡುತ್ತಿರುವುದು ಇದೇ ಮೊದಲು. ಜಾತಿ ಸಮೀಕರಣ, ಪಕ್ಷದ ರ‌್ಯಾಲಿಗಳಿಗೆ ಹೆಸರು ಕೊಡುವುದು ಮತ್ತಿತರ ಅನೇಕ ವಿಷಯಗಳಲ್ಲಿ ಅನಂತಕುಮಾರ್ ಅವರ ಕೊರತೆ ಕಾಡುತ್ತಿದೆ. ಅವರು ಒಂದು ರೀತಿ ‘ಚಾಣಕ್ಯ’ ಇದ್ದಂತಿದ್ದರು. ಅನಂತಕುಮಾರ್ ಅವರ ಅಗಲಿಕೆಯಿಂದ ಯಾರಿಗಾದರೂ ವೈಯಕ್ತಿಕವಾಗಿ ಮತ್ತು ರಾಜಕೀಯವಾಗಿ ದೊಡ್ಡ ನಷ್ಟ ಆಗಿದ್ದರೆ ಅದು ನನಗೆ. ಬಹಳ ಹೊಡೆತ ಉಂಟಾಗಿದೆ

ಅನಂತಕುಮಾರ್ ಅವರ ಪಾತ್ರವನ್ನು ಇನ್ನು ಮುಂದೆ ನೀವು ನಿರ್ವಹಿಸಲು ಪ್ರಯತ್ನಿಸುತ್ತಿದ್ದೀರಿ?

ಅನಿವಾರ್ಯವಾಗಿ ಮಾಡಲೇಬೇಕು. ಯಶಸ್ವಿಯಾಗಬೇಕಿದೆ. ಅನಂತಕುಮಾರ್ ಕೊರತೆ ಕಾಡದಂತೆ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಒಡನಾಟ ಮುಂದುವರೆಸುತ್ತಿದ್ದೇ

ಬೆಂಗಳೂರು ಬಿಜೆಪಿಯ ಸಾಮ್ರಾಟ್ ಅಶೋಕ ಚಕ್ರವರ್ತಿ ಎಂದೆಲ್ಲ ನಿಮ್ಮನ್ನು ಕರೆಯುತ್ತಾರಲ್ಲ? ನಿಜವಾಗಿಯೂ ಬೆಂಗಳೂರು ಬಿಜೆಪಿ ನಿಮ್ಮ ಹಿಡಿತದಲ್ಲಿ ಉಳಿದಿದೆಯೇ?

ದಶಕಗಳ ಹಿಂದೆ ನನಗೆ ಸಾಮ್ರಾಟ್ ಎಂಬ ಪದ ಕೊಟ್ಟಿದ್ದೇ ‘ಕನ್ನಡಪ್ರಭ’ ಪತ್ರಿಕೆ. ಆ ಹೆಸರಿಗಿಂತ ಹೆಚ್ಚಾಗಿ ಜನಸಾಮಾನ್ಯರ ಜೊತೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದೆ. ಮೊದಲು ಪಕ್ಷದ ಕೇವಲ ಮೂರ್ನಾಲ್ಕು ಶಾಸಕರು ಬೆಂಗಳೂರಿನಲ್ಲಿ ಇದ್ದರು. ನಂತರ ಅದು ೧೮ ಶಾಸಕರವರೆಗೆ ಹೋಯಿತು. ಅದರಲ್ಲಿ ನನ್ನ ಪಾಲು ದೊಡ್ಡದಾಗಿದೆ. ನಾನು ಎಲ್ಲೋ ಹುಟ್ಟಿ ಇಲ್ಲಿಗೆ ಬರಲಿಲ್ಲ. ಬೆಂಗಳೂರಿನಲ್ಲೇ ಹುಟ್ಟಿ, ಬೆಂಗಳೂರಿನಲ್ಲೇ ಬೆಳೆದಿದ್ದೇನೆ. ಬೆಂಗಳೂರಿನಲ್ಲೇ ಸಾಯುತ್ತೇನೆ. ಇದಕ್ಕಾಗಿಯೇ ಅಶೋಕ್ ಅಂದರೆ ಬೆಂಗಳೂರು ಎಂಬಂತೆ ನೋಡುತ್ತಾರೆ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಹೀಗಾಗಿ, ಬೆಂಗಳೂರಲ್ಲಿ ಪಕ್ಷ ಕಟ್ಟುವುದು ನನ್ನ ಕರ್ತವ್ಯ.

ಬೆಂಗಳೂರಿನಲ್ಲಿ ಬೇರೆ ಯಾವುದೇ ಮುಖಂಡರು ಅದರಲ್ಲೂ ವಿಶೇಷವಾಗಿ ಒಕ್ಕಲಿಗರು ಬೆಳೆಯುವುದನ್ನು ತಾವು ತಡೆಯುತ್ತೀರಿ ಎಂಬ ಆರೋಪ ನಿಮ್ಮ ಮೇಲಿದೆ?

ಇದು ಮಾಧ್ಯಮಕ್ಕಷ್ಟೇ ಸೀಮಿತವಾಗಿರುವ ಆರೋಪ. ನಾನು ಬಿಜೆಪಿಯ ಬೆಂಗಳೂರು ನಗರ ಘಟಕಕ್ಕೆ ಅಧ್ಯಕ್ಷನಾಗುವವರೆಗೆ ಪಕ್ಷದಲ್ಲಿ ಒಕ್ಕಲಿಗ ನಾಯಕರೇ ಇರಲಿಲ್ಲ. ನಾನು ಪ್ರಭಾವಿಯಾಗಿ ಬೆಳೆದ ನಂತರ ಅನೇಕ ಒಕ್ಕಲಿಗ ಮುಖಂಡರು ಶಾಸಕರಾದರು. ಕಳೆದ ಬಾರಿ ಸುಮಾರು ೬೦ ಮಂದಿ ಒಕ್ಕಲಿಗ ಪಾಲಿಕೆ ಸದಸ್ಯರಿದ್ದರು. ಇದೆಲ್ಲ ನಾನು ಬಂದ ಮೇಲೆ ಆಗಿದ್ದು. ಮೊದಲು ಬೆಂಗಳೂರಿನಲ್ಲಿ ದೇವೇಗೌಡರ ಸಾಮ್ರಾಜ್ಯ ಇತ್ತು. ಇವತ್ತು ಅದನ್ನು ಕಿತ್ತೆಸೆದು ಬಿಜೆಪಿ ಸಾಮ್ರಾಜ್ಯ ಸ್ಥಾಪಿಸಿದ್ದೇನೆ. ಹಾಗಂತ ನಾನು ಒಬ್ಬನೇ ಮಾಡಿದ್ದೇನೆ ಎಂದಲ್ಲ. ಒಂದು ತಂಡವಾಗಿ ಕೆಲಸ ಮಾಡಿದ್ದೇವೆ. ನಾನೂ ಬೆಳೆದಿದ್ದೇನೆ. ಇತರ ಅನೇಕರನ್ನೂ ಬೆಳೆಸಿದ್ದೇನೆ.

ಸದಾನಂದಗೌಡ, ಶೋಭಾ ಕರಂದ್ಲಾಜೆ ಮತ್ತಿತರ ಮುಖಂಡರನ್ನು ಬರದಂತೆ ತಡೆಯಲು ನೀವು ಕೋಟೆ ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತೀರಿ ಎಂಬ ಮಾತಿದೆ?

ಯಾರನ್ನೂ ತಡೆಯುವ ಪ್ರಯತ್ನ ಮಾಡಿಲ್ಲ. ಸ್ಥಳೀಯರಿಗೆ ಮೊದಲ ಆದ್ಯತೆ ಸಿಗಬೇಕು ಎಂಬುದು ನನ್ನ ಉದ್ದೇಶ. ಮಂಗಳೂರಿನಲ್ಲಿ ಇರುವವರಿಗೆ ಮಂಗಳೂರಿನಲ್ಲಿ, ಬೀದರ್‌ನಲ್ಲಿ ಇರುವವರಿಗೆ ಬೀದರ್‌ನಲ್ಲಿ ಅವಕಾಶ ಸಿಗಬೇಕು. ಎಲ್ಲಿ ಹುಟ್ಟಿ ಬೆಳೆದಿರುತ್ತಾರೊ ಅಲ್ಲಿ ಅವಕಾಶ ಸಿಗಬೇಕು. ಹಾಗೆ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವವರಿಗೆ ಮೊದಲ ಪ್ರಾಶಸ್ತ್ಯ ಲಭಿಸಬೇಕು. ಅವಕಾಶ ಹೆಚ್ಚಳವಾದಾಗ ಯಾರು ಬೇಕಾದರೂ ಬರಲಿ. ಅದಕ್ಕೇನು ಅಭ್ಯಂತರವಿಲ್ಲ. ಹಾಗಂತ ಕೋಟೆ ಕಟ್ಟಿಕೊಳ್ಳುವ ಪ್ರವೃತ್ತಿ ನನ್ನದಲ್ಲ.

ಸದಾನಂದಗೌಡರನ್ನು ಈ ಬಾರಿ ಬೇರೆ ಕ್ಷೇತ್ರಕ್ಕೆ ಕಳಿಸುವ ಪ್ರಯತ್ನ ಮಾಡಿ ವಿಫಲರಾಗಿದ್ದೀರಂತೆ?

ಹಿಂದೆ ಸದಾನಂದಗೌಡರು ಉಡುಪಿಯಿಂದ ಬೆಂಗಳೂರಿಗೆ ಬರುವ ಮೊದಲು ನನ್ನ ಹೆಸರನ್ನು ಅಂದಿನ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಅಂತಿಮ ಮಾಡಿದ್ದರು. ಅನಂತಕುಮಾರ್ ಅವರೂ ನನ್ನನ್ನು ಕಣಕ್ಕಿಳಿಯುವಂತೆ ಹೇಳಿದರು. ಆದರೆ, ಅನಂತಕುಮಾರ್ ರಾಷ್ಟ್ರ ರಾಜಕಾರಣಕ್ಕೆ ಮತ್ತು ನಾನು ರಾಜ್ಯ ರಾಜಕಾರಣಕ್ಕೆ ಎಂಬ ನಿಲುವು ಹೇಳಿದೆ. ನಂತರ ಅನಂತಕುಮಾರ್ ಅವರು ಸದಾನಂದ ಗೌಡರನ್ನು ಕರೆದುಕೊಂಡು ನಮ್ಮ ಮನೆಗೆ ಬಂದರು. ನಾನು ಅವರನ್ನು ಗೆಲ್ಲಿಸಿಕೊಂಡು ಬಂದೆ. ಅದಕ್ಕೂ ಮೊದಲು ಡಿ.ಬಿ.ಚಂದ್ರೇಗೌಡ, ಎಚ್.ಟಿ.ಸಾಂಗ್ಲಿಯಾನ ಅವರನ್ನು ಕರೆತಂದಿದ್ದೂ ನಾನೇ. ಈಗ ಪಕ್ಷ ಗೆಲ್ಲಬೇಕು, ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದಷ್ಟೇ ಮುಖ್ಯ

ನೀವು ದೇವೇಗೌಡರ ಕುಟುಂಬದವರಿಗೆ ಮಾಹಿತಿ ನೀಡುತ್ತಿದ್ದಿರಿ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಸೆಳೆದು ಸರ್ಕಾರ ರಚಿಸುವ ಪ್ರಯತ್ನದಲ್ಲಿ ನಿಮ್ಮನ್ನು ದೂರ ಇರಿಸಲಾಗಿತ್ತಂತೆ?

ನಾನು ಆ ವೇಳೆ ಮಾಧ್ಯಮಗಳಿಂದ ದೂರ ಉಳಿದಿದ್ದೆ ಅಷ್ಟೆ. ದೆಹಲಿಯಲ್ಲಿ ಪಕ್ಷದ 104 ಶಾಸಕರನ್ನೂ ಅನ್ಯ ಪಕ್ಷಗಳ ಸೆಳೆತದಿಂದ ಉಳಿಸಿಕೊಳ್ಳುವುದಕ್ಕಾಗಿ ರೆಸಾರ್ಟ್‌ನಲ್ಲಿ ‘ಚೌಕಿದಾರ’ನಾಗಿ ಕೆಲಸ ಮಾಡುವಂತೆ ಪಕ್ಷದ ಅಧ್ಯಕ್ಷರೇ ಜವಾಬ್ದಾರಿ ವಹಿಸಿದ್ದರು. ಹೀಗಾಗಿ, ದೂರ ಇಟ್ಟಿದ್ದರು ಎಂಬುದರಲ್ಲಿ ಹುರುಳಿಲ್ಲ.

ನಿಮ್ಮದೇ ಒಕ್ಕಲಿಗ ಸಮುದಾಯದವರು ಎನ್ನುವ ಕಾರಣಕ್ಕಾಗಿ ಕುಮಾರಸ್ವಾಮಿ ಅವರನ್ನು ಕೆಳಗಿಳಿಸಿ ಸರ್ಕಾರ ರಚಿಸುವುದು ನಿಮಗೆ ಇಷ್ಟ ಇಲ್ಲವಂತೆ?

ದೇವೇಗೌಡರು ಮತ್ತವರ ಕುಟುಂಬದ ಸದಸ್ಯರು ಭಸ್ಮಾಸುರ ಇದ್ದಂತೆ. ಅವರೊಂದಿಗೆ ಸಂಪರ್ಕ ಅಥವಾ ಸಂಬಂಧ ಬೆಳೆಸಿದರೆ ನಾವೂ ಸುಟ್ಟು ಭಸ್ಮವಾಗುತ್ತೇವೆ. ಅವರು ಬೇರೆ ಯಾವುದೇ ಒಕ್ಕಲಿಗರನ್ನೂ ಬೆಳೆಯಲು ಬಿಡುವುದಿಲ್ಲ. ನನ್ನ ಸೋಲಿಸಲು ಸತತವಾಗಿ ಪ್ರಯತ್ನ ಮಾಡಿದ್ದಾರೆ. ಹೀಗಿರುವಾಗ ಅವರನ್ನು ಸಂಪರ್ಕಿಸಲು ಹೋಗುವುದಿಲ್ಲ. ನಾನು ಇಲ್ಲಿಯೇ ಹುಟ್ಟಿ ಬೆಳೆದಿದ್ದೇನೆ. ದೇವೇಗೌಡರ ಕುಟುಂಬದವರು ಹಾಸನದಿಂದ ಬಂದವರು. ದೇವೇಗೌಡರನ್ನು ವಿರೋಧಿಸಿ ರಾಜಕಾರಣ ಮಾಡಿದ್ದರಿಂದಲೇ ನಾನು ಬಿಜೆಪಿಯಲ್ಲಿ ಬೆಳೆಯಲು ಸಾಧ್ಯವಾಯಿತು.

ತೇಜಸ್ವಿನಿ ಅನಂತಕುಮಾರ್ ಅವರನ್ನು ಅಭ್ಯರ್ಥಿ ಮಾಡುವುದಕ್ಕೆ ವಿರೋಧಿಸಿದ್ದರಂತೆ ಯಾಕೆ?

ತೇಜಸ್ವಿನಿ ನನ್ನ ತಂಗಿ ಇದ್ದಂತೆ. ಒಬ್ಬ ಅಣ್ಣ ತಂಗಿಯ ನಡುವೆ ಯಾವತ್ತೂ ಭಿನ್ನಾಭಿಪ್ರಾಯ ಮೂಡಲು ಸಾಧ್ಯವಿಲ್ಲ. ಕಳೆದ ೧೫ ದಿನಗಳ ಹಿಂದೆ ತೇಜಸ್ವಿನಿ ಅವರು ನನ್ನ ಮನೆಗೆ ಬಂದು ಒಬ್ಬ ಅಣ್ಣನ ರೀತಿ ಈ ಚುನಾವಣೆ ನಡೆಸಿಕೊಡಬೇಕು ಎಂದು ವಿನಂತಿಸಿದರು. ಈ ಚುನಾವಣೆಯನ್ನು ಅನಂತಕುಮಾರ್ ಅವರಿಗೆ ಅರ್ಪಣೆ ಮಾಡುತ್ತೇನೆ. ಅನಂತಕುಮಾರ್ ಅವರ ಆರು ಚುನಾವಣೆಗಳನ್ನು ನಾನು ನಡೆಸಿದ್ದೇನೆ. ಇದು ಏಳನೆಯ ಚುನಾವಣೆ ಎಂದುಕೊಳ್ಳುತ್ತೇನೆ. ಅನಂತಕುಮಾರ್ ಅವರೇ ನಮ್ಮ ಅಭ್ಯರ್ಥಿ ಎಂದು ಭಾವಿಸಿಯೇ ಚುನಾವಣೆ ನಡೆಸಿ ಗೆಲುವು ತಂದು ಕೊಡುವೆ ಎಂಬ ಮಾತನ್ನು ಹೇಳಿದೆ.

ಅಶೋಕ್ ಅವರು ಡಿಸಿಎಂ ಹುದ್ದೆ ಏರಿದ್ದರೂ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಇನ್ನೂ ಅಲಂಕರಿಸಿಲ್ಲ ಯಾಕೆ?

ಕಳೆದ ಬಿಜೆಪಿ ಸರ್ಕಾರದಲ್ಲಿ ನಾನು ಸಚಿವನಾಗಿದ್ದ ವೇಳೆಯೇ ರಾಜ್ಯಾಧ್ಯಕ್ಷರಾಗುವ ಪ್ರಸ್ತಾವನೆ ಬಂದಿತ್ತು. ನಾನು ನಿರಾಕರಿಸಿದ್ದೆ. ಮುಂದೊಂದು ದಿನ ಮತ್ತೆ ಅವಕಾಶ ಬರುತ್ತದೆ. ರಾಜ್ಯಾಧ್ಯಕ್ಷ ಆಗಿಯೇ ಆಗುತ್ತೇನೆ.