ಯಾದಗಿರಿ, [ಏ.11]: ಡಾ. ಉಮೇಶ್ ಜಾಧವ್ ಹೆಸರು ಕೇಳಿ ಖರ್ಗೆ ನಡುಗುತ್ತಿದ್ದಾರೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರು ವ್ಯಂಗ್ಯವಾಡಿದ್ದಾರೆ.

ಇಂದು [ಗುರುವಾರ] ಯಾದಗಿರಿ ಜಿಲ್ಲೆ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಕಂದಕೂರಿನಲ್ಲಿ ಪ್ರಚಾರದಲ್ಲಿ ಮಾತನಾಡಿದ ಚಿಂಚನಸೂರು,  ಡಾಕ್ಟರ್ ಹೆಸರು ಘೋಷಣೆಯಾದ ಬಳಿಕ ಖರ್ಗೆಗೆ ನಡುಕ ಶುರುವಾಗಿದ್ದು,  ಲೋಕಸಭಾ ಚುನಾವಣೆ ನಿಲ್ಲಬೇಕಾ ಬೇಡ ಅಂತ ಎಲ್ಲರಿಗೂ ಕೇಳಲು ಶುರು ಮಾಡಿದ್ದ ಎಂದು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.

 ಡಾ. ಉಮೇಶ್ ಜಾಧವ್ ಹೆಸರು ಕೇಳಿ ಖರ್ಗೆಗೆ ಉರಿಚಳಿ ಬಂದಿದೆ. ಮಲ್ಲಿಕಾರ್ಜುನ ಖರ್ಗೆ ಹಳೆ ಎತ್ತು. ಹಳೆ ಎತ್ತನ್ನು ನಾವೂ ಎತ್ತಿನ ಕೊಠಡಿಯಲ್ಲಿ ಕಟ್ಟಿಹಾಕುತ್ತೇವೆ. ಇದು ತಳಿ ಹೇಗಿದೆ ಎಂದು ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಅವರನ್ನು ತೋರಿಸಿ ಜಾಧವ್ ಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.