ಬೆಂಗಳೂರು[ಮಾ.27]: ರಾಜ್ಯ ಬಿಜೆಪಿ ಘಟಕ ಶಿಫಾರಸು ಮಾಡದಿದ್ದರೂ ಆಶ್ಚರ್ಯಕರ ರೀತಿಯಲ್ಲಿ ಬಿಜೆಪಿಯ ಭದ್ರ ಕೋಟೆಯಾಗಿರುವ ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್‌ನನ್ನು ಪಡೆದ ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಅವರು ಅನೇಕ ಹಿರಿಯ ಶಾಸಕರ ಅನುಪಸ್ಥಿತಿಯ ನಡುವೆ ನಾಮಪತ್ರ ಸಲ್ಲಿಸಿದ್ದಾರೆ.

ಈ ವೇಳೆ ತೇಜಸ್ವಿ ಅವರಿಗೆ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌, ಚಿಕ್ಕಪ್ಪ ಕೂಡಾ ಆಗಿರುವ ಬಸವನಗುಡಿ ಕ್ಷೇತ್ರದ ಶಾಸಕ ರವಿಸುಬ್ರಹ್ಮಣ್ಯ, ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್‌, ನಗರ ಬಿಜೆಪಿ ಅಧ್ಯಕ್ಷ ಸದಾಶಿವ, ಮಾಜಿ ಮೇಯರ್‌ ನಟರಾಜ್‌ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ರಾಮಚಂದ್ರ ಸೇರಿದಂತೆ ಕೆಲ ಹಿರಿಯ ಮತ್ತು ಕಿರಿಯ ಮುಖಂಡರು ಸಾಥ್‌ ನೀಡಿದ್ದಾರೆ.

ತಮ್ಮ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಡ್ ನಲ್ಲಿ ತೇಜಸ್ವಿ ಸೂರ್ಯ ಆಸ್ತಿ ವಿವರ ಬಹಿರಂಗಪಡಿಸಿದ್ದಾರೆ. 

ತೇಜಸ್ವಿ ಆಸ್ತಿ 22 ಲಕ್ಷ

ಮೊದಲ ಬಾರಿಗೆ ಚುನಾವಣಾ ಕಣ ಎದುರಿಸುತ್ತಿರುವ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದು, ಕೇವಲ 22.23 ಲಕ್ಷ ರು. ಮಾತ್ರ ಆಸ್ತಿ ಹೊಂದಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಕೆ ಮಾಡಿದ್ದಾರೆ. 72 ಸಾವಿರ ರು. ನಗದು, ವಿವಿಧ ಬ್ಯಾಂಕ್‌ಗಳಲ್ಲಿ 8.04 ಲಕ್ಷ ರು. ಠೇವಣಿ, 4.75 ಲಕ್ಷ ರು.ಗಿಂತ ಅಧಿಕ ವಿವಿಧ ವಿಮೆಯಲ್ಲಿ ಹೂಡಿಕೆ ಮಾಡಿದ್ದಾರೆ. ಇನ್ನು 13.46 ಲಕ್ಷ ರು. ಚರಾಸ್ತಿಯನ್ನು ಹೊಂದಿದ್ದಾರೆ. ಯಾವುದೇ ಸ್ಥಿರಾಸ್ತಿ ಹಾಗೂ ಸಾಲ ಹೊಂದಿಲ್ಲ. ಅಲ್ಲದೇ, ಚಿನ್ನಾಭರಣ ಹೊಂದಿರುವ ಬಗ್ಗೆಯೂ ಆಸ್ತಿ ವಿವರದಲ್ಲಿ ಉಲ್ಲೇಖಿಸಿಲ್ಲ. ಯಾವುದೇ ಸ್ವಂತ ವಾಹನವನ್ನು ಸಹ ಹೊಂದಿಲ್ಲ.