ಮೈಸೂರು[ಮಾ.28]: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಅವರು ಸಲ್ಲಿಸಿರುವ ನಾಮಪತ್ರದಲ್ಲಿ ಕೆಲವು ಪ್ರಮುಖ ಲೋಪದೋಷ ಇದೆ ಎಂದು ಆರೋಪಿಸಿರುವ ಬಿಜೆಪಿ ವಕ್ತಾರ ಗೋ.ಮಧುಸೂದನ್ ನಾಮಪತ್ರ ತಿರಸ್ಕರಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಬುಧವಾರ ನಡೆದ ಪರಿಶೀಲನೆ ವೇಳೆ ನಾಮಪತ್ರದಲ್ಲಿನ ದೋಷವನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದೆವು. ಆದರೆ ನಮ್ಮ ವಾದ ಪುರಸ್ಕರಿಸಲಿಲ್ಲ. ಆದ್ದರಿಂದ ಗುರುವಾರ ಹೈಕೋರ್ಟ್‌ನಲ್ಲಿ ಈ ಸಂಬಂಧ ಅರ್ಜಿ ಸಲ್ಲಿಸಲಾಗುವುದು ಎಂದರು. ವಿಜಯಶಂಕರ್ ಪುತ್ರಿ ವಿ.ಎಚ್.ಕನಕ ಅವಲಂಬಿತರಾಗಿದ್ದು, ಅವರ ಪ್ಯಾನ್ ಸಂಖ್ಯೆ ಇಲ್ಲ ಎಂದು ನಮೂದಿಸಲಾಗಿದೆ. ಅಲ್ಲಿ ಹಂಚಿಕೆಯಾಗಿಲ್ಲ ಎಂದು ಬರೆಯಬೇಕಿತ್ತು ಎಂದು ಆರೋಪಿಸಿದೆ.

ಜೊತೆಗೆ ಹಲವು ಅಂಕಣಗಳನ್ನು ಭರ್ತಿ ಮಾಡದೆ ಕಾಲಿ ಬಿಡಲಾಗಿದೆ. ಪ್ರಮಾಣ ಪತ್ರಕ್ಕೆ ನೋಟರಿ ವಕೀಲರಿಂದ ಸಹಿ ಮಾಡಿಸಿದ್ದರೂ, ಕೊನೆಯ ಪುಟ ಹೊರತುಪಡಿಸಿ ಬೇರೆ ಎಲ್ಲಿಯೂ ದಿನಾಂಕ ನಮೂದಾಗಿಲ್ಲ ಹಾಗೂ ದಾಖಲಾತಿ ಸಂಖ್ಯೆಯನ್ನು ನಮೂದಿಸಿಲ್ಲ ಎಂದು ತಿಳಿಸಿದರು.