ಬೆಂಗಳೂರು, (ಮಾ.29): ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ರಾಜ್ಯದ ಮೂರು ಕ್ಷೇತ್ರಗಳ ಅಭ್ಯರ್ಥಿಗಳು ಫೈನಲ್​ ಆಗಿದ್ದಾರೆ. 

ಚಿಕ್ಕೋಡಿ-ಸದಲಗಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಅಣ್ಣಾ ಸಾಹೇಬ್ ಜೊಲ್ಲೆ ಕಣಕ್ಕಿಳಿಯಲಿದ್ದಾರೆ. ಈ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವ ಉಮೇಶ್ ಕತ್ತಿ ಸೋದರ ರಮೇಶ್ ಕತ್ತಿ ಪ್ರಬಲ ಆಕಾಂಕ್ಷಿಯಾಗಿದ್ದರು. 

ರಮೇಶ್ ಕತ್ತಿ ಮಾತ್ರವಲ್ಲದೇ ಬಿಜೆಪಿ ಮುಖಂಡ ಪ್ರಭಾಕರ ಕೋರೆ ಕೂಡ ಈ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಆದ್ರೆ, ಅಚ್ಚರಿಯ ಬೆಳವಣಿಗೆಯಲ್ಲಿ ಕಳೆದ ವಿಧಾನ ಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆಯವರ ಪತಿ ಅಣ್ಣಾ ಸಾಹೇಬ್ ಜೊಲ್ಲೆಗೆ ಟಿಕೆಟ್ ಸಿಕ್ಕಿದೆ. 

ಇನ್ನು  ರಾಯಚೂರು(ಮೀಸಲು) ಕ್ಷೇತ್ರದಿಂದ ರಾಜಾ ಅಮರೇಶ್​ ನಾಯಕ್ ಸ್ಪರ್ಧಿಸಲಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಕರಡಿ ಸಂಗಣ್ಣಗೆ ಟಿಕೆಟ್​ ಫೈನಲ್ ಆಗಿದೆ.

ಈ ಮೂಲಕ 28 ಕ್ಷೇತ್ರಗಳಿಗೆ ಬಿಜೆಪಿಯ ಅಭ್ಯರ್ಥಿಗಳು ಫೈನಲ್ ಆಗಿದೆ. ಒಟ್ಟು 7 ಹಂತದಲ್ಲಿ ದೇಶಾದ್ಯಂತ ನಡೆಯಲಿದ್ದು, ಕರ್ನಾಟಕದಲ್ಲಿ ಏಪ್ರಿಲ್ 18 ಹಾಗೂ ಏ.23 ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಇನ್ನು ಮೇ. 23ಕ್ಕೆ ಮತದಾನ ಎಣಿಕೆ ನಡೆಯಲಿದೆ.