ಕೋಲ್ಕತಾ[ಮೇ.15]: ಲೋಕಸಭೆ ಚುನಾವಣೆ ಪ್ರಚಾರದುದ್ದಕ್ಕೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿಯ ಮಧ್ಯೆ ಇಷ್ಟುದಿನ ನಡೆಯುತ್ತಿದ್ದ ವಾಕ್ಸಮರ ಮಂಗಳವಾರ ಸಂಘರ್ಷವಾಗಿ ಮಾರ್ಪಟ್ಟಿದೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಮಂಗಳವಾರ ಕೋಲ್ಕತಾದಲ್ಲಿ ರೋಡ್‌ ಶೋ ಕೈಗೊಂಡಿದ್ದ ವೇಳೆ ಶಾ ಅವರ ವಾಹನ ಮೇಲೆ ದುರ್ಷರ್ಮಿಗಳು ಕಲ್ಲು ತೂರಿದ್ದಾರೆ. ಬಳಿಕ ಬಿಜೆಪಿ ಕಾರ್ಯಕರ್ತರು ಮತ್ತು ಟಿಎಂಸಿ ಹಾಗೂ ಎಡಪಕ್ಷದ ವಿದ್ಯಾರ್ಥಿ ಕಾರ್ಯಕರ್ತರ ಮಧ್ಯೆ ಕಲ್ಲುತೂರಾಟ, ಮಾರಾಮಾರಿ ಏರ್ಪಟಿದೆ.

ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಬೆಂಕಿ ಹಚ್ಚಲಾಗಿದೆ. ಇದರಿಂದಾಗಿ ಅಮಿತ್‌ ಶಾ ಅವರು ರಾರ‍ಯಲಿಯನ್ನು ಅರ್ಧಕ್ಕೇ ಮೊಟಕುಗೊಳಿಸಿ ಪೊಲೀಸ್‌ ಬೆಂಗಾವಲಿನಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳಬೇಕಾಗಿ ಬಂದಿತು. ಇದೇ ವೇಳೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ಗೂಂಡಾವರ್ತನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.

ಏನಾಯ್ತು?:

ಮಂಗಳವಾರ ಕೋಲ್ಕತಾದ ಕೇಂದ್ರ ಭಾಗದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ರೋಡ್‌ ಶೋ ನಿಗದಿಯಾಗಿತ್ತು. ಇದನ್ನು ಲೋಕಸಭೆ ಕೊನೆಯ ಹಂತದ ಚುನಾವಣೆಗೂ ಮುನ್ನ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಆಗಿ ಬಳಸಿಕೊಂಡ ಬಿಜೆಪಿ, ಕೋಲ್ಕತಾದ ಬೀದಿ ಬೀದಿಗಳಲ್ಲಿ ಮೋದಿ ಹಾಗೂ ಅಮಿತ್‌ ಶಾ ಅವರ ಬೃಹತ್‌ ಪೋಸ್ಟರ್‌ ಹಾಗೂ ಕಟೌಟ್‌ಗಳನ್ನು ಅಳವಡಿಸಿತ್ತು. ಆದರೆ, ಇದರಿಂದ ಸಿಟ್ಟಾದ ಟಿಎಂಸಿ ಕರ್ಯಕರ್ತರು ಪೊಲೀಸರ ನೆರವಿನೊಂದಿಗೆ ಪೋಸ್ಟರ್‌ ಮತ್ತು ಬ್ಯಾನರ್‌ಗಳನ್ನು ಕಿತ್ತುಹಾಕಿದ್ದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಪ್ರತಿಭಟನೆ ನಡೆಸಿತ್ತು.

ಬಿಜೆಪಿ ಹಾಗೂ ಟಿಎಂಸಿ ಕಾರ್ಯರ್ಕರ ನಡುವಿನ ಘರ್ಷಣೆಯ ಹೊರತಾಗಿಯೂ ಅಮಿತ್‌ ಶಾ, ಮಂಗಳವಾರ ಸಂಜೆ ನಿಗದಿಯಂತೆ ಕೇಂದ್ರ ಕೋಲ್ಕತಾದ ಶಾಹಿದ್‌ ಮಿನಾರ್‌ದಿಂದ ಉತ್ತರ ಕೋಲ್ಕತಾದ ಸ್ವಾಮಿ ವಿವೇಕಾನಂದರ ನಿವಾಸದ ವರೆಗೆ ರೋಡ್‌ ಶೋ ಕೈಗೊಂಡಿದ್ದರು. ಅಮಿತ್‌ ಶಾ ಅವರು ಕಾಲೇಜು ಮೈದಾನವನ್ನು ಹಾದುಹೋಗುತ್ತಿರುವಾವ ಅಮಿತ್‌ ಶಾ ಅವರ ವಾಹನದ ಮೇಲೆ ಕಲ್ಲುತೂರಿದ್ದು, ಸಂಘರ್ಷ ಭುಗಿಲೇಳುವಂತೆ ಮಾಡಿದೆ.

ಕೋಲ್ಕತಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಹೊರಭಾಗದಲ್ಲಿ ಎಡ ಪಕ್ಷ ಮತ್ತು ಟಿಎಂಸಿ ವಿದ್ಯಾರ್ಥಿ ಘಟಕದ ಕಾರ್ಯಕರ್ತರು ಕಪ್ಪು ಧ್ವಜ ಪ್ರದರ್ಶಿಸಿ ‘ಅಮಿತ್‌ ಶಾ ಗೋ ಬ್ಯಾಕ್‌’ ಎಂದು ಘೋಷಣೆ ಕೂಗಿದ್ದರಿಂದ ಬಿಜೆಪಿ ಕಾರ್ಯಕರ್ತರ ಜೊತೆ ಸಂಘರ್ಷ ಏರ್ಪಟ್ಟಿದೆ. ಬಳಿಕ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದರಿಂದ ರೋಡ್‌ ಶೋ ಮುಂದುವರಿದಿತ್ತು.

ರೋಡ್‌ ಶೋ ವಿದ್ಯಾಸಾಗರ್‌ ಕಾಲೇಜು ಹಾಗೂ ಯುನಿವರ್ಸಿಟಿ ಹಾಸ್ಟೇಲ್‌ ಬಳಿ ಸಾಗುತ್ತಿದ್ದ ವೇಳೆ ಟಿಎಂಸಿ ಕಾರ್ಯಕರ್ತರು ಅಮಿತ್‌ ಶಾ ಅವರ ವಾಹನದ ಮೇಲೆ ಕಲ್ಲು ತೂರಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರು ಹಾಸ್ಟೇಲ್‌ನ ಗೇಟ್‌ ಅನ್ನು ಬಂದ್‌ ಮಾಡಿ, ಸೈಕಲ್‌ ಮತ್ತು ಬೈಕ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಹಾಸ್ಟೇಲ್‌ನ ಕಟ್ಟಡಕ್ಕೂ ಕಲ್ಲು ತೂರಿ ಕಿಟಕಿ ಗಾಜುಗಳನ್ನು ಪುಡಿಗಟ್ಟಿದ್ದಾರೆ. ತಕ್ಷಣವೇ ಪೊಲೀಸರ ದೊಡ್ಡ ತುಕಡಿಯನ್ನು ಕರೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು.