ಬೀದರ್‌ನಲ್ಲಿ ಭುಗಿಲೆದ್ದ ಅಸಮಾಧಾನ, ಸಚಿವ ಬಂಡೆಪ್ಪ ವಿರುದ್ಧ ಗಂಭೀರ ಆರೋಪ
ಮೈತ್ರಿ ಧರ್ಮವನ್ನು ಪಾಲಿಸಲೇಬೇಕೆಂದು ಹೋದಲ್ಲಿ ಬಂದಲ್ಲಿ ಭಾಷಣ ಮಾಡುವ ಸಚಿವ ಬಂಡೆಪ್ಪ ಕಾಶೆಂಪೂರ್ ವಿರುದ್ಧವೇ ಕಾಂಗ್ರೆಸ್ ಕಾರ್ಯಕರ್ತರು ಗಂಭೀರ ಆರೋಪ ಮಾಡಿದ್ದಾರೆ.
ಬೀದರ್, (ಏ.20): ರಾಜ್ಯದಲ್ಲಿ 2ನೇ ಹಂತದ ಲೋಕಸಭಾ ಮತದಾನಕ್ಕೆ ಇನ್ನೆರಡು ದಿನ ಬಾಕಿ ಇದೆ. ಆದ್ರೆ ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಬಿಸಿ ಎದುರಾಗಿದೆ.
ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಪ್ರಚಾರಕ್ಕೆ ಕರೆಯುತ್ತಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ. ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಸಚಿವ ರಾಜಶೇಖರ ಪಾಟೀಲ್ ಎದುರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂದು ಕಡೆ ಮಕ್ಕಳ ಪಕ್ಷದಿಂದ ಬಂದಿರುವ ಅಶೋಕ್ ಖೇಣಿ, ಮತ್ತೊಂದು ಕಡೆ ಜೆಡಿಎಸ್ ಮುಖಂಡ, ಸಚಿವ ಬಂಡೆಪ್ಪ ಕಾಶೆಂಪೂರ್ ಕ್ಷೇತ್ರಕ್ಕೆ ಹೇಳದೇ ಕೇಳದ ಬರ್ತಾರೆ ಪ್ರಚಾರ ಮಾಡುತ್ತಾರೆ ಹೋಗುತ್ತಾರೆ ಎಂದು ಕಾರ್ಯಕರ್ತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ನಾವು ಭಾಗಿಯಾಗಬೇಕಂದ್ರೆ ಗಾಡಿ ಕೊಡಲ್ಲ, ಮಾಹಿತಿನೂ ಕೊಡಲ್ಲ. ಮೂಲ ಕಾಂಗ್ರೆಸಿಗರನ್ನ ಕಡೆಗಣನೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಕೆಪಿಸಿಸಿ ಕಾರ್ಯದರ್ಶಿ ಈಶ್ವರ್ ಖಂಡ್ರೆ ಅಖಾಡದಲ್ಲಿದ್ದರೆ, ಬಿಜೆಪಿಯಿಂದ ಹಾಲಿ ಸಂಸದ ಭಗವಂತ ಖೂಬಾ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.