ಬೆಂಗಳೂರು, [ಮಾ.29]: ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್​ ರಾಜ್​ಗೆ ಚುನಾವಣಾ ಆಯೋಗ ವಿಶಲ್ ಚಿಹ್ನೆ ನೀಡಿದೆ.

ಬಹುಭಾಷ ನಟ ಪ್ರಕಾಶ್ ರಾಜ್ ಅವರೇ ತಮಗೆ  ವಿಶಲ್ ಚಿಹ್ನೆ ನೀಡುವಂತೆ ಚುನಾವಣೆ ಆಯೋಗದ ಬಳಿ ಕೋರಿಕೊಂಡಿದ್ದರು. ಅದರಂತೆ ಆಯೋಗ ವಿಶಲ್​ ಚಿಹ್ನೆಗೆ ಒಪ್ಪಿಗೆ ನೀಡಿದೆ.

ಚಿಹ್ನೆ ಕುರಿತಂತೆ ಟ್ವೀಟ್​ ಮಾಡಿರುವ ಪ್ರಕಾಶ್​ ರಾಜ್​, ನಮ್ಮ ವಿಶಲ್​ ಚಿಹ್ನೆಗೆ ಚುನಾವಣಾ ಆಯೋಗ ಒಪ್ಪಿಗೆ ನೀಡಿದೆ. ನಾವೆಲ್ಲರೂ, ಭ್ರಷ್ಟಾಚಾರದ, ಆಲಸ್ಯದ, ಬೇಜವಾಬ್ದಾರಿ ರಾಜಕಾರಣಿಗಳ ವಿರುದ್ಧ ವಿಶಲ್​ ಊದೋಣ ಎಂದು ಟ್ವೀಟ್ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.

 ಬಿಜೆಪಿಯ ಹಾಲಿ ಸಂಸದ ಪಿ.ಸಿ.ಮೋಹನ್ ಹಾಗೂ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ರಿಜ್ವಾನ್ ಹರ್ಷದ್ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಕಣದಲ್ಲಿದ್ದಾರೆ.

ಇವರಿಗೆ ಪೈಪೋಟಿ ನೀಡಲು ಪ್ರಕಾಶ್ ರಾಜ್ ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದು, ಇದೇ ಏಪ್ರಿಲ್ 18ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಇನ್ನು ಏ.23ರಂದು 2ನೇ ಹಂತದ ಮತದಾನ ನಡೆಯಲಿದ್ದು, ಮೇ. 23ಕ್ಕೆ ಮತ ಎಣಿಕೆ ನಡೆಯಲಿದೆ.