ಹೈದರಾಬಾದ್(ಮಾ.24): ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಎಐಎಂಐಎಂ ಮುಖ್ಯಸ್ಥ, ಸಂಸದ ಅಸದುದ್ದೀನ್ ಒವೈಸಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ರಾಜಕೀಯ ಮುಂದುವರೆಸಿದ್ದಾರೆ.

ಪುಲ್ವಾಮಾದಲ್ಲಿ ಉಗ್ರ ದಾಳಿಯಾದಾಗ ನೀವು ದನದ ಮಾಂಸ ತಿಂದು ಮಲಗಿದ್ರಾ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೈದರಾಬಾದ್‌ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಒವೈಸಿ, ಪುಲ್ವಾಮಾದಲ್ಲಿ ಸ್ಫೋಟಕಗಳನ್ನು ಹೊತ್ತು ಭಯೋತ್ಪಾದಕ ಆತ್ಮಾಹುತಿ ದಾಳಿ ನಡೆಸಿದಾಗ ದೇಶದ ಚೌಕಿದಾರ ದನದ ಮಾಂಸ ತಿಂದು ಮಲಗಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

ಬಾಲಾಕೋಟ್ ನಲ್ಲಿ ಭಾರತೀಯ ವಾಯುಸೇನೆ ಬಾಂಬ್ ಹಾಕಿ ಬಂದಿದ್ದು 250 ಜನ ಮೃತಪಟ್ಟಿದ್ದಾರೆ ಎಂದು ಶಾ ಹೇಳಿಕೆ ನೀಡಿದ್ದರೆ, 300 ಫೋನ್ ಗಳನ್ನು ಎನ್‌ಟಿಆರ್ ಓ ಟ್ಯಾಪ್ ಮಾಡಿದೆ ಅಂತ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಯಾರು ಸತ್ಯ ಹೇಳುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಒವೈಸಿ ಕಿಡಿಕಾರಿದ್ದಾರೆ.

ಬಾಲಾಕೋಟ್ ನಲ್ಲಿರುವ 300 ಪೋನ್‌ಗಳನ್ನು ಪತ್ತೆ ಹಚ್ಚಲು ಸರ್ಕಾರಕ್ಕೆ ಸಾಧ್ಯ ಎಂದಾದರೆ, ಕಾಶ್ಮೀರದಲ್ಲಿರುವ ಪುಲ್ವಾಮಾಗೆ 50 ಕೆಜಿ ಆರ್ ಡಿಎಕ್ಸ್ ಬಾಂಬ್ ಸಾಗಿಸಿದ್ದು ಗೊತ್ತಾಗದಿರುವುದು ಹೇಗೆ ಸಾಧ್ಯ ಎಂಧು ಒವೈಸಿ ಪ್ರಶ್ನಿಸಿದ್ದಾರೆ.

ಭಾರತೀಯ ಯೋಧರ ಮೇಲೆ ಬಾಂಬ್ ದಾಳಿ ನಡೆದಾಗ ಪ್ರಧಾನಿ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್ ಬೀಫ್ ಬಿರಿಯಾನಿ ತಿಂದು ಮಲಗಿದ್ದರೆ ಎಂದು ಒವೈಸಿ ಪ್ರಶ್ನಿಸಿದ್ದಾರೆ.