ನವದೆಹಲಿ(ಮೇ.22): ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ತಮ್ಮನ್ನು ಕೊಲ್ಲಲು ಸಂಚು ರೂಪಿಸುತ್ತಿದೆ ಎಂಬ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾಗಿದೆ.

ಪ್ರಧಾನಿ ಮತ್ತು ಪಕ್ಷದ ವಿರುದ್ಧ ನಿರಾಧಾರ ಆರೋಪ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿರುವ ಬಿಜೆಪಿ, ಕೇಜ್ರಿವಾಲ್ ಗೆ ನೊಟೀಸ್ ಜಾರಿ ಮಾಡಿದೆ. ಅಲ್ಲದೇ 7 ದಿನಗಳವರೆಗೆ ಉತ್ತರಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.

ಈ ಕುರಿತು ಮಾಹಿತಿ ನೀಡಿರುವ ಬಿಜೆಪಿ ನಾಯಕ ವಿಜೇಂದ್ರ ಗುಪ್ತಾ, ಅತ್ಯಂತ ಕೀಳುಮಟ್ಟದ ರಾಜಕಾರಣ ಮಾಡುತ್ತಿರುವ ಅರವಿಂದ್ ಕೇಜ್ರಿವಾಲ್ ಮತ್ತು ಮನೀಷ್ ಸಿಸೋಡಿಯಾ ವಿರುದ್ಧ ನೊಟೀಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ದೆಹಲಿ ಜನತೆಗೆ ಸುಳ್ಳು ಹೇಳುವ ಮೂಲಕ ಮೋಸ ಮಾಡುತ್ತಿರುವ ಕೇಜ್ರಿ, ತಮ್ಮ ವೈಫಲ್ಯ ಮರೆಮಾಚಲು ಪ್ರಧಾನಿಯವರನ್ನೂ ಎಳೆದು ತಂದಿರುವುದು ಅಸಹ್ಯ ತರಿಸಿದೆ ಎಂದು ವಿಜೇಂದ್ರ ಗುಪ್ತಾ ಹರಿಹಾಯ್ದಿದ್ದಾರೆ.