ಇಟಾನಗರ[ಮಾ.16]: ಒಂದು ಮತದಿಂದ ಸರ್ಕಾರವೇ ಬದಲಾಗುತ್ತೆ. ಪ್ರಜಾಪ್ರಭುತ್ವದಲ್ಲಿ ಒಂದೊಂದು ಮತಕ್ಕೂ ಬೆಲೆ ಇದೆ. ಹೀಗಾಗಿ ಯಾವೊಬ್ಬ ಮತದಾರನಿಗೂ ಮತ ಚಲಾಯಿಸಲು ಯಾವುದೇ ತೊಡಕಾಗದಂತೆ ಚುನಾವಣಾ ಆಯೋಗ ಕಾರ್ಯ ನಿರ್ವಹಿಸುತ್ತದೆ. 

ಅರುಣಾಚಲ ಪ್ರದೇಶದ ಹ್ಯೂಲಿಯಾಂಗ್ ವಿಧಾನಸಭೆಯ ಮಾಲೋಗಾಮ್ ಹಳ್ಳಿಯಲ್ಲಿ ಕೇವಲ ಒಬ್ಬ ಮತದಾರನಿಗಾಗಿ ಚುನಾವಣಾ ಆಯೋಗವು ಪೋಲಿಂಗ್ ಬೂತ್ ನಿರ್ಮಿಸಲಿದೆ. ಈ ಹಳ್ಳಿಯ ಒಬ್ಬ ಮಹಿಳೆ ಏಪ್ರಿಲ್ 11ರಂದು ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗೆ ಮತದಾನ ಮಾಡಲಿದ್ದಾರೆ. ಕಳೆದ ಬಾರಿ ಅಂದರೆ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಇಬ್ಬರು ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದರು. ಇದು ಭಾರತದ ಅತಿ ಚಿಕ್ಕ ಚುನಾವಣಾ ಮತಗಟ್ಟೆ ಎನ್ನಲಾಗುತ್ತದೆ.

ಅರುಣಾಚಲ ಪ್ರದೇಶದ ಪೂರ್ವ ಲೋಕಸಭಾ ಕ್ಷೇತ್ರದಲ್ಲಿ ಈ ಮತಗಟ್ಟೆ ಇದೆ. ಇಲ್ಲಿ ಕೇವಲ ಒಬ್ಬ ಮತದಾರನಿದ್ದಾನೆ ಎಂಬ ಮಾಹಿತಿ ಪಡೆದ ಚುನಾವಣಾ ಆಯೋಗ ಈ ಮತದಾರನಿಗಾಗಿ ತಾತ್ಕಾಲಿಕ ಮತಗಟ್ಟೆ ನಿರ್ಮಿಸುವುದಾಗಿ ತಿಳಿಸಿದೆ. ರುಣಾಚಲ ಪ್ರದೆಶದ ಬಿಜೆಪಿಯ ಟ್ವಿಟರ್ ಖಾತೆಯಲ್ಲಿ ಈ ವಿಚಾರವನ್ನು ಶೇರ್ ಮಾಡಲಾಗಿದೆ. 'ಪ್ರಜಾಪ್ರಭುತ್ವದ ಶಕ್ತಿ ಮತದಾರರಲ್ಲಿ ಇದೆ. ಅರುಣಾಚಲ ಪ್ರದೇಶದ ಮಾಲೋಗಾಮ್ ವಿಧಾನಸಭಾ ಕ್ಷೇತ್ರದ ಮಾಲೋಗಾಮ್ ಹಳ್ಳಿಯಲ್ಲಿ 45-ಹ್ಯೂಲಿಯಾಂಗ್ LACಯಲ್ಲಿ ಕೇವಲ ಒಬ್ಬ ಮತದಾರನಿದ್ದಾನೆ ಹಾಗೂ ಹೊಸ ಅರುಣಾಚಲ ಪ್ರದೇಶಕ್ಕಾಗಿ ಪ್ರತಿಯೊಂದು ಮತ ಮಹತ್ವಪೂರ್ಣ' ಎಂದಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯನ್ನು ಏಪ್ರಿಲ್ 11ರಂದು ಒಟ್ಟಿಗೆ ನಡೆಸಲು ಅಖಾಡ ಸಜ್ಜಾಗಿದೆ.