ಮದ್ದೂರು[ಮಾ.13]: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿರುವ ಪುತ್ರ ನಿಖಿಲ್‌ ಕುಮಾರಸ್ವಾಮಿ ಗೆಲುವಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ಪಟ್ಟಣದ ಹೊಳೆ ಆಂಜನೇಯಸ್ವಾಮಿಗೆ ಹರಕೆ ಹೊತ್ತಿದ್ದು, ಅದರಂತೆ ಮಂಗಳವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಮೂರು ವಾರಗಳ ಹಿಂದೆ ಹೊಳೆ ಆಂಜನೇಯಸ್ವಾಮಿಗೆ ಒಂದೂಕಾಲು ರೂಪಾಯಿ ಹರಕೆ ಕಟ್ಟಿದ್ದರು. ಸತತವಾಗಿ ಐದು ಮಂಗಳವಾರ ದೇಗುಲಕ್ಕೆ ಬಂದು ದೇವರಿಗೆ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಸುವುದೆಂಬ ನಂಬಿಕೆಯೊಂದಿಗೆ ಅನಿತಾ ಅವರು ದೇವರಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಅದರಂತೆ ಮೂರನೇ ಮಂಗಳವಾರವೂ ದೇವಾಲಯಕ್ಕೆ ಭೇಟಿ ನೀಡಿದ್ದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಸ್ಥಾನಕ್ಕೆ ಭೇಟಿ ನೀಡುವುದು, ದೇವರಿಗೆ ಪೂಜೆ ಸಲ್ಲಿಸುವುದು ನನ್ನ ವೈಯಕ್ತಿಕ ವಿಚಾರ. ಇಲ್ಲಿ ನಾನು ಯಾವುದೇ ರಾಜಕಾರಣವನ್ನು ಮಾತನಾಡುವುದಿಲ್ಲ. ನನಗೂ ಖಾಸಗಿ ಜೀವನವಿದೆ. ಅದನ್ನು ಪ್ರಶ್ನಿಸಬೇಡಿ ಎಂದು ಹೇಳಿ ಅಲ್ಲಿಂದ ನಿರ್ಗಮಿಸಿದರು.