ಕಾರವಾರ[ಏ.21]: ಎರಡನೇ ಹಂತದ ಚುನಾವಣೆ ಪ್ರಚಾರಕ್ಕೆ ತೆರೆ ಬೀಳಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಇದ್ದರೂ ಬಿಜೆಪಿಯ ಪ್ರಮುಖ ನಾಯಕರಾರ‍ಯರೂ ಉತ್ತರ ಕನ್ನಡ ಕ್ಷೇತ್ರದತ್ತ ತಲೆ ಹಾಕದಿರುವುದು ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿಯಿಂದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಕಾರವಾರದಲ್ಲಿ ಒಂದು ದಿನ ಪ್ರಚಾರ ಸಭೆಯಲ್ಲಿ ಪಾಲ್ಗೊಂಡರೆ, ಚಿತ್ರನಟಿ ಮಾಳವಿಕಾ ಶಿರಸಿಯಲ್ಲಿ ಹಾಗೂ ತಾರಾ ಅನುರಾಧ ಕಾರವಾರದಲ್ಲಿ ಪ್ರಚಾರ ನಡೆಸಿದರು. ಹೇಗಿದ್ದರೂ ತಾವೇ ಗೆಲ್ಲುತ್ತೇವೆ ಎನ್ನುವುದು ಬಿಜೆಪಿ ಅಭ್ಯರ್ಥಿ ಅನಂತಕುಮಾರ್‌ ಹೆಗಡೆ ಅವರ ಅತಿಯಾದ ಆತ್ಮವಿಶ್ವಾಸವೋ ಅಥವಾ ಪಕ್ಷದ ಮುಖಂಡರು ಅವರ ಗೆಲುವಿನ ಮೇಲೆ ಇಟ್ಟಿರುವ ನಂಬಿಕೆಯೋ ಏನೋ? ಪಕ್ಷದ ಪ್ರಮುಖ ಲೀಡರ್‌ಗಳು ಯಾರೂ ಉತ್ತರ ಕನ್ನಡದತ್ತ ತಲೆ ಹಾಕಿಲ್ಲ.

ಅನಂತಕುಮಾರ್‌ ಹೆಗಡೆ ಅವರಲ್ಲಿ ಸ್ಟಾರ್‌ ಪ್ರಚಾರಕರು ಯಾರಾದರೂ ಕ್ಷೇತ್ರಕ್ಕೆ ಬರಲಿದ್ದಾರೆಯೇ ಎಂದು ಕೇಳಿದಾಗ ಶ್ರೀ ಶ್ರೀ ಶ್ರೀ ಅನಂತಕುಮಾರ್‌ ಹೆಗಡೆ ಮಾತ್ರ ಬರಲಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದರು. ಜತೆಗೆ ಆತ್ಮವಿಶ್ವಾಸದ ನಗುವೂ ಇತ್ತು. ಮೋದಿ ಅಲೆ, ಜತೆಗೆ ಕ್ಷೇತ್ರದ ವ್ಯಾಪ್ತಿಯಲ್ಲಿ ಐವರು ಬಿಜೆಪಿ ಶಾಸಕರು ಇರುವುದರಿಂದ ತಮ್ಮದೆ ಗೆಲುವು ಎಂದು ಬೀಗುತ್ತಿದ್ದಾರೆ. ಆನೆ ನಡೆದಿದ್ದೇ ದಾರಿ ಎಂದು ಹೆಚ್ಚು ಕಡಿಮೆ ಪ್ರಚಾರಕ್ಕೆ ಸ್ವತಃ ತಾವೇ ನೇತೃತ್ವ ವಹಿಸಿದ್ದಾರೆ.