ಮುಂಬೈ[ಏ.27]: ರಿಲಯನ್ಸ್‌ ಉದ್ಯಮಗಳ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಿಲಿಂದ್‌ ದೇವೋರಾ ಅವರನ್ನು ಬಹಿರಂಗವಾಗಿಯೇ ಬೆಂಬಲಿಸಿದ ಬೆನ್ನಲ್ಲೇ, ಮುಕೇಶ್‌ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ್ದಾರೆ.

ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ನಡೆದ ಚುನಾವಣೆ ರ‍್ಯಾಲಿಯ ಮುಂದಿನ ಸೀಟಿನಲ್ಲಿ ಕುಳಿತಿದ್ದ ಅನಂತ್‌ ಅಂಬಾನಿ ಅವರು, ತಾನು ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಕೇಳಲು ಬಂದಿದ್ದೇನೆ. ಅಲ್ಲದೆ, ನಾನು ದೇಶವನ್ನು ಬೆಂಬಲಿಸುತ್ತೇನೆ ಎಂದಿದ್ದಾರೆ. ಈ ಮೂಲಕ ತಮ್ಮ ಬೆಂಬಲವನ್ನು ಬಿಜೆಪಿಗೆ ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಮುಕೇಶ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ಬೆಂಬಲಿಸಿದರೆ, ಅವರ ಪುತ್ರ ಅನಂತ್‌ ಬಿಜೆಪಿ ಬೆಂಬಲಿಸಿದಂತಾಗಿದೆ.

ದಕ್ಷಿಣ ಮುಂಬೈ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಿಲಿಂದ್‌ ದೇವೋರಾ ಅವರು ಇಲ್ಲಿನ ನಿವಾಸಿಯಾಗಿದ್ದಾರೆ. ಹಾಗಾಗಿ, ಈ ಕ್ಷೇತ್ರದಲ್ಲಿ ವಾಸಿಸುತ್ತಿರುವ ಜನತೆಯ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಹಾಗಾಗಿ, ಅವರು ದಕ್ಷಿಣ ಮುಂಬೈ ಕ್ಷೇತ್ರಕ್ಕೆ ಉತ್ತಮ ಅಭ್ಯರ್ಥಿ ಎಂದು ಹೇಳಿದ್ದರು.