ಕುಂದಗೋಳ (ಮೇ. 14): ಮಾಜಿ ಮುಖ್ಯಮಂತ್ರಿ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆಶೀರ್ವಾದ ಎಲ್ಲಿವರೆಗೆ ಇರುತ್ತದೆಯೋ ಅಲ್ಲಿವರೆಗೂ ಮೈತ್ರಿ ಸರ್ಕಾರ ಇರುತ್ತದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಮೈತ್ರಿ ಸರ್ಕಾರದ ಅಳಿವು- ಉಳಿವು ಸಿದ್ದರಾಮಯ್ಯ ಮೇಲಿದೆ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.

ಉಪಚುನಾವಣಾ ಕಣದಲ್ಲಿ ಇದೇ ಮೊದಲ ಬಾರಿಗೆ ಪ್ರಚಾರ ನಡೆಸಿದ ಅವರು, ಮೇ 23ರ ಬಳಿಕ ಮೈತ್ರಿ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಿರುವ ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು.

ನಾನು, ಸಿದ್ದರಾಮಯ್ಯ ಅಣ್ಣ- ತಮ್ಮ ಇದ್ದಂತೆ ಇದ್ದೇವೆ. ಜೆಡಿಎಸ್‌-ಕಾಂಗ್ರೆಸ್ಸಿಗರೆಲ್ಲರೂ ಒಟ್ಟಾಗಿದ್ದೇವೆ. ಸಿದ್ದರಾಮಯ್ಯ ಅವರನ್ನು ಸರ್ಕಾರದಲ್ಲಿ ಗೌರವಯುತವಾಗಿಯೇ ನಡೆಸಿಕೊಳ್ಳುತ್ತಿದ್ದೇವೆ. ಅವರ ಹಾಗೂ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಸರ್ಕಾರದ ಮೇಲೆ ಸಿದ್ದರಾಮಯ್ಯ ಆಶೀರ್ವಾದ ಇರುವರೆಗೂ ಈ ಸರ್ಕಾರಕ್ಕೆ ಏನೂ ಆಗಲು ಸಾಧ್ಯವಿಲ್ಲ ಎಂದರು.

ನಾನು ಕುಟುಂಬದೊಂದಿಗೆ ರೆಸ್ಟ್‌ ತೆಗೆದುಕೊಳ್ಳಲು ರೆಸಾರ್ಟ್‌ಗೆ ತೆರಳಿದರೆ ಅದಕ್ಕೂ ಬಣ್ಣ ಹಚ್ಚುತ್ತಾರೆ. ರೆಸ್ಟ್‌ ಮಾಡಲು ರೆಸಾರ್ಟ್‌ಗೆ ಹೋಗಿದ್ದು ಅಪರಾಧವಾ? ಸಿದ್ದರಾಮಯ್ಯ ಅವರನ್ನು ಸೈಡ್‌ಲೈನ್‌ ಮಾಡಲು ರೆಸಾರ್ಟ್‌ಗೆ ಹೋಗಿದ್ದಾರೆ ಎಂದೆಲ್ಲ ಹಬ್ಬಿಸುತ್ತಾರೆ.

ಅವರನ್ನು ನಾನೇಕೆ ಸೈಡ್‌ಲೈನ್‌ ಮಾಡಲಿ ಎಂದ ಅವರು, ಇದನ್ನೆಲ್ಲ ನಿಮಗೆ ಹೇಳಿದವರು ಯಾರು ಸ್ವಾಮಿ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಸರ್ಕಾರದ ಯಾವುದೇ ಯೋಜನೆಗಳನ್ನು ನಾವು ನಿಲ್ಲಿಸಿಲ್ಲ. ನಿಲ್ಲಿಸುವುದೂ ಇಲ್ಲ ಎಂದು ಪುನರುಚ್ಚರಿಸಿದರು.

ಸರ್ಕಾರ ಏಕೆ ಬೀಳಬೇಕು?:

ಚಿಂಚೋಳಿ ಮತ್ತು ಕುಂದಗೋಳ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದರೆ ಸರ್ಕಾರ ರಚಿಸುತ್ತೇವೆ ಎಂದು ಬಿಜೆಪಿಗರು ಹೇಳುತ್ತಿದ್ದಾರೆ. ಅದು ಹೇಗೆ ಅವರು ಸರ್ಕಾರ ರಚಿಸುತ್ತಾರೋ ಗೊತ್ತಿಲ್ಲ. ಆದರೆ, ಎಲ್ಲೆಡೆ ಅದನ್ನೇ ಹೇಳಿ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಇದೇ ರೀತಿ ಗುಲ್ಲು ಹಬ್ಬಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಕಿಡಿಕಾರಿದರು.

ಉತ್ತರ ಕರ್ನಾಟಕ ವಿರೋಧಿ ಅಲ್ಲ:

ನನ್ನನ್ನು ಉತ್ತರ ಕರ್ನಾಟಕದ ವಿರೋಧಿ ಎಂದು ಬಿಂಬಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಆದರೆ ಮಹದಾಯಿ ವಿಷಯವಾಗಿ ಕಾಂಗ್ರೆಸ್‌-ಜೆಡಿಎಸ್‌ ಎರಡೂ ಸ್ಪಂದಿಸಿವೆ. ಆದರೆ, ಪ್ರಧಾನಿಗಳು ಅಧಿಸೂಚನೆ ಹೊರಡಿಸುತ್ತಿಲ್ಲ. ಈ ಬಗ್ಗೆ ಇಲ್ಲಿನ ಬಿಜೆಪಿಗರು ಚಕಾರ ಎತ್ತುತ್ತಿಲ್ಲ. ಇದು ಉತ್ತರ ಕರ್ನಾಟಕಕ್ಕೆ ಬಿಜೆಪಿ ಮಾಡಿರುವ ಅನ್ಯಾಯ ಎಂದರು. ಮಹದಾಯಿ ಕೆಲಸ ನಿರ್ವಹಿಸಲು ನಾವು ಸಿದ್ಧರಿದ್ದೇವೆ. ಆದರೆ, ಕೇಂದ್ರ ಸರ್ಕಾರ ನೋಟಿಫಿಕೇಷನ್‌ ಹೊರಡಿಸದೆ ನಾವೇನು ಮಾಡಲು ಸಾಧ್ಯವಿಲ್ಲ ಎಂದರು.

ರೆಸಾರ್ಟಿನಲ್ಲಿದ್ದರೂ ಬರ ನಿರ್ವಹಣೆ:

ನಾನು ರೆಸಾರ್ಟ್‌ನಲ್ಲಿದ್ದರೂ ಬರದ ವಿಷಯವನ್ನು ಮರೆತಿಲ್ಲ. ಸಂಪುಟ ಸಭೆ ನಡೆಸಿ . 750 ಕೋಟಿ ಬಿಡುಗಡೆ ಮಾಡಿದ್ದೇವೆ. ಈ ಹಣ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿದೆ. ಈ ಹಣದಲ್ಲಿ ಕುಡಿಯುವ ನೀರು, ಮೇವು ಪೂರೈಕೆ ಸೇರಿದಂತೆ ಮತ್ತಿತರ ಬರಪರಿಹಾರ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಲಾಗಿದೆ. ಗುಳೆ ತಪ್ಪಿಸಲು ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನರೇಗಾ ಯೋಜನೆಗೆ ಕೇಂದ್ರ ಸರ್ಕಾರ ಹಣವನ್ನು ಬಿಡುಗಡೆ ಮಾಡಿಲ್ಲ. ಆದರೂ ರಾಜ್ಯ ಸರ್ಕಾರವೇ ಹಣವನ್ನು ನೀಡಿ ಕಾಮಗಾರಿ ಕೈಗೆತ್ತಿಕೊಳ್ಳಲು ಹೇಳಲಾಗಿದೆ ಎಂದರು.