ಬೆಂಗಳೂರು[ಮೇ.24]: ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಏಳಕ್ಕೆ ಏಳು ಮಂದಿ ಅಭ್ಯರ್ಥಿಗಳು ಮೋದಿ ಹವಾದಲ್ಲಿ ಕೊಚ್ಚಿ ಹೋಗಿದ್ದರೆ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ನಾಲ್ಕು ಮಂದಿಯ ಪೈಕಿ ಒಬ್ಬರು (ಪ್ರಜ್ವಲ್‌ ರೇವಣ್ಣ) ಮಾತ್ರ ಗೆಲುವು ಕಾಣುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಬಿಜೆಪಿಯಿಂದ ಕಣದಲ್ಲಿದ್ದ ಎಂಟು ಮಂದಿ ಹೊಸಬರ ಪೈಕಿ 7 ಮಂದಿ ಭರ್ಜರಿ ಜಯ ದಾಖಲಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ 8 ಹೊಸ ಮುಖಗಳಿಗೆ ಟಿಕೆಟ್‌ ನೀಡಿತ್ತು. ಇದರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ಮಾತ್ರ ಸೋತಿದ್ದಾರೆ. ಉಳಿದ ಅಭ್ಯರ್ಥಿಗಳಾದ ಬೆಂಗಳೂರು ದಕ್ಷಿಣ ಕ್ಷೇತ್ರದ ತೇಜಸ್ವಿ ಸೂರ್ಯ, ಕೋಲಾರದಲ್ಲಿ ಎಸ್‌. ಮುನಿಸ್ವಾಮಿ, ಚಿತ್ರದುರ್ಗದಲ್ಲಿ ಎ. ನಾರಾಯಣಸ್ವಾಮಿ, ಹುಕ್ಕೇರಿಯಲ್ಲಿ ಅಣ್ಣಾ ಸಾಹೇಬ್‌ ಜೊಲ್ಲೆ, ರಾಯಚೂರಿನಲ್ಲಿ ರಾಜಾ ಅಮೇಶ್ವರ ನಾಯಕ್‌ ಹಾಗೂ ಬಳ್ಳಾರಿಯಲ್ಲಿ ವೈ. ದೇವೇಂದ್ರಪ್ಪ ಜಯ ಸಾಧಿಸಿದ್ದಾರೆ.

ಕಾಂಗ್ರೆಸ್‌ನ ಏಳೂ ಅಭ್ಯರ್ಥಿಗಳ ಪರಾಭವ:

ಕಾಂಗ್ರೆಸ್‌ನ 7 ಅಭ್ಯರ್ಥಿಗಳು ಕೂಡ ಬಿಜೆಪಿ ಹಾಲಿ ಸಂಸದರ ಎದುರು ಸೋಲುಂಡಿರುವುದು ಆಶ್ಚರ್ಯ ಮೂಡಿಸಿದೆ. ಬೀದರ್‌ನಲ್ಲಿ ಈಶ್ವರ್‌ ಖಂಡ್ರೆ, ದಕ್ಷಿಣ ಕನ್ನಡದಲ್ಲಿ ಮಿಥುನ್‌ ರೈ, ಬೆಳಗಾವಿಯಲ್ಲಿ ಡಾ. ವಿರೂಪಾಕ್ಷಪ್ಪ ಸಾಧುನವರ್‌, ಬಾಗಲಕೋಟೆಯಲ್ಲಿ ವೀಣಾ ಕಾಶಪ್ಪನವರ್‌, ಕೊಪ್ಪಳದಲ್ಲಿ ರಾಜಶೇಖರ್‌ ಹಿಟ್ನಾಳ್‌, ಹಾವೇರಿಯಲ್ಲಿ ಡಿ.ಆರ್‌.ಪಾಟೀಲ್‌ ಹಾಗೂ ದಾವಣಗೆರೆಯಲ್ಲಿ ಎಚ್‌.ಬಿ. ಮಂಜಪ್ಪ ಸೋಲಿನ ರುಚಿ ನೋಡಿದ್ದಾರೆ.

ಜೆಡಿಎಸ್‌ನಲ್ಲಿ ಪ್ರಜ್ವಲಿಸಿದ ರೇವಣ್ಣ:

ಜೆಡಿಎಸ್‌ನ ಐದು ಕ್ಷೇತ್ರಗಳ ಪೈಕಿ ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಹೊರತುಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಮಂಡ್ಯದಲ್ಲಿ ನಿಖಿಲ್‌ ಕುಮಾರಸ್ವಾಮಿ, ಉಡುಪಿ-ಚಿಕ್ಕಮಗಳೂರಿನಲ್ಲಿ ಪ್ರಮೋದ್‌ ಮಧ್ವರಾಜ್‌, ವಿಜಯಪುರದಲ್ಲಿ ಡಾ. ಸುನೀತಾ ಚೌವ್ಹಾಣ್‌ ಹಾಗೂ ಉತ್ತರ ಕನ್ನಡದಲ್ಲಿ ಆನಂದ್‌ ಅಸ್ನೋಟಿಕರ್‌ ಪರಾಭವಗೊಂಡಿದ್ದಾರೆ.

ಪಕ್ಷೇತರರಾಗಿ ಸುಮಲತಾ ಅಂಬರೀಷ್‌ ದಾಖಲೆ:

ರಾಜ್ಯದ ಜಿದ್ದಾಜಿದ್ದಿನ ಕಣವಾಗಿದ್ದ ಮಂಡ್ಯದಲ್ಲಿ ಕೊನೆಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಭರ್ಜರಿ ಜಯ ಸಾಧಿಸಿದ್ದಾರೆ. ಬೆಂಗಳೂರು ಕೇಂದ್ರದಲ್ಲಿ ಬಹುಭಾಷಾ ನಟ ಪ್ರಕಾಶ್‌ ರೈ ಸೋತಿದ್ದಾರೆ.