ಲಕ್ನೋ(ಮೇ.16): ಲೋಕಸಭೆ ಚುನಾವಣೆಗಾಗಿ ಎಸ್ ಪಿ ನಾಯಕ ಅಖಿಲೇಶ್ ಯಾದವ್, ತಮ್ಮ ಜೊತೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಕರೆದುಕೊಂಡು ಹೋಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಅರೆ! ಅಖಿಲೇಶ್ ಪ್ರಚಾರಕ್ಕೆ ಯೋಗಿ ಯಾಕೆ ಹೋಗ್ತಾರೆ ಅಂತೀರಾ? ಅಖಿಲೇಶ್ ಜೊತೆ ಪ್ರಚಾರ ಸಭೆಗಳಲ್ಲಿ ಸುತ್ತಾಡುತ್ತಿರುವುದು ಯೋಗಿ ಆದಿತ್ಯನಾಥ್ ತದ್ರೂಪಿ ಸುರೇಶ್ ಠಾಕೂರ್ ಎಂಬುವರು.

ನೋಡಲು ಯೋಗಿ ಅವರಂತೆ ಕಾಣುವ ಸುರೇಶ್ ಠಾಕೂರ್ ಅವರನ್ನು ಅಖಿಲೇಶ್ ಎಲ್ಲಾ ಪ್ರಚಾರ ಸಭೆಗಳಲ್ಲಿ ಬಳಸುತ್ತಿದ್ದಾರೆ. ಯೋಗಿ ಅವರ ನ್ಯೂನ್ಯತೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ಅವರ ತದ್ರೂಪಿಯನ್ನೇ ಬಳಸುತ್ತಿದ್ದಾರೆ.

ಇದೀಗ ಅಖಿಲೇಶ್ ಯಾದವ್ ಮತ್ತು ಯೋಗಿ ತದ್ರೂಪಿ ಸುರೇಶ್ ಠಾಕೂರ್ ಖಾಸಗಿ ವಿಮಾನದಲ್ಲಿ ಜೊತೆಯಾಗಿ ಊಟ ಮಾಡುತ್ತಿರುವ ಫೋಟೋವೊಂದನ್ನು ಖುದ್ದು ಅಖಿಲೇಶ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

ಅಖಿಲೇಶ್ ಯಾದವ್ ಸಿಎಂ ಕುರ್ಚಿಯಿಂದ ಕೆಳಗಿಳಿದು ಯೋಗಿ ಉತ್ತರಪ್ರದೇಶದ ನೊಗ ಹೊತ್ತ ವೇಳೆ, ಮುಖ್ಯಮಂತ್ರಿ ಕಚೇರಿಯನ್ನು ಯೋಗಿ ಆದಿತ್ಯನಾಥ್ ಗಂಗಾಜಲದಿಂದ ಶುದ್ಧಗೊಳಿಸಿದ್ದರು. 

ಈ ಘಟನೆಯನ್ನು ನೆನೆಸಿಕೊಂಡಿರುವ ಅಖಿಲೇಶ್, ತಮ್ಮ ಅಂದಿನ ನಿರ್ಧಾರದಂತೆ ಇದೀಗ ಯೋಗಿ ಅವರೊಂದಿಗೆ ಊಟ ಮಾಡುತ್ತಿರುವುದಾಗಿ ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ