ನವದೆಹಲಿ[ಮೇ.21]: ಈ ಬಾರಿ ಯಾವುದೇ ಪಕ್ಷ ಅಥವಾ ಮೈತ್ರಿಕೂಟಕ್ಕೆ ಬಹುಮತದ ಸಾಧ್ಯತೆ ಇಲ್ಲ ಎಂಬ ಚುನಾವಣಾ ಪೂರ್ವ ಸಮೀಕ್ಷೆಗಳ ಹಿನ್ನೆಲೆಯಲ್ಲಿ, ಕೇಂದ್ರದಲ್ಲಿ ನೂತನ ಸರ್ಕಾರ ರಚನೆ ಪ್ರಕ್ರಿಯೆಯಲ್ಲಿ ಕಿಂಗ್‌ಮೇಕರ್‌ ಆಗುವ ಕನಸು ಕಂಡಿದ್ದ ಹಲವು ನಾಯಕರಿಗೆ, ಭಾನುವಾರ ಪ್ರಕಟವಾದ ಚುನಾವಣೋತ್ತರ ಫಲಿತಾಂಶ ಭರ್ಜರಿ ಶಾಕ್‌ ನೀಡಿದೆ. ಹೀಗಾಗಿ ಕಿಂಗ್‌ಮೇಕರ್‌ ಆಗುವ ಕನಸು ಹೊತ್ತವರೀಗ ಹೇಗಾದರೂ ಮಾಡಿ ಮೋದಿ ಸರ್ಕಾರ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರದಂತೆ ತಡೆಯುಲು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ.

ಲೋಕಸಭಾ ಚುನಾವಣೆ ಘೋಷಣೆಯಾದಾಗಿನಿಂದಲೂ ಮೋದಿ ಸರ್ಕಾರದ ವಿರುದ್ಧ ಹರಿಹಾಯುತ್ತಲೇ, ಪ್ರಧಾನಿ ಹುದ್ದೆ ಮೇಲೊಂದು ಕಣ್ಣಿಟ್ಟು ವಿಪಕ್ಷಗಳನ್ನು ಒಂದುಗೂಡಿಸುವ ಯತ್ನ ಮಾಡುತ್ತಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ, ಕಿಂಗ್‌ಮೇಕರ್‌ ಆಗುವುದನ್ನು ಬಿಟ್ಟು ಮೋದಿಗೆ ಅಡ್ಡಗಾಲಾಗುವುದು ಹೇಗೆ ಎಂಬ ರಣತಂತ್ರ ರೂಪಿಸಲು ಮುಂದಾಗಿದ್ದಾರೆ.

ನಾಯ್ಡು ಆಸೆಗೆ ತಣ್ಣೀರು:

ಒಂದೂವರೆ ವರ್ಷದ ಹಿಂದಿನವರೆಗೂ ಎನ್‌ಡಿಎದ ಭಾಗವಾಗಿದ್ದ ಚಂದ್ರಬಾಬು ನಾಯ್ಡು, ಲೋಕಸಭಾ ಚುನಾವಣೆ ಘೋಷಣೆಯಾದ ಮೇಲೆ ಎಲ್ಲಾ ವಿಪಕ್ಷಗಳ ನಾಯಕರನ್ನು ಒಗ್ಗೂಡಿಸುವ ಮೂಲಕ ಚುನಾವಣಾಪೂರ್ವ ಮೈತ್ರಿಕೂಟ ರಚನೆಗೆ ಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಫಲಿತಾಂಶ ದಿನ ಹತ್ತಿರ ಬರುತ್ತಿದ್ದಂತೆ 10ಕ್ಕೂ ಹೆಚ್ಚು ವಿಪಕ್ಷ ನಾಯಕರನ್ನು ನಾಯ್ಡು ಭೇಟಿ ಮಾಡಿದ್ದರು.

ಈ ಮೂಲಕ ಸಾಧ್ಯವಾದರೆ ಪ್ರಧಾನಿ ಪಟ್ಟ ಏರುವ ಆಸೆಯನ್ನೂ ಇಟ್ಟುಕೊಂಡಿದ್ದರು. ಆದರೆ ಚುನಾವಣೋತ್ತರ ಫಲಿತಾಂಶಗಳು ನಾಯ್ಡುಗೆ ದೊಡ್ಡ ಮಟ್ಟದ ಶಾಕ್‌ ನೀಡಿದೆ. ಹೀಗಾಗಿ ಅವರೀಗ ಕಿಂಗ್‌ಮೇಕರ್‌ ಆಗುವ ಕನಸು ದೂರತಳ್ಳಿ ಒಂದು ವೇಳೆ ಎನ್‌ಡಿಎಗೆ ಬಹುಮತ ಸಿಗದೇ ಹೋದಲ್ಲಿ, ಮೋದಿ ಅಧಿಕಾರಕ್ಕೆ ಬರದಂತೆ ಏನು ಮಾಡಬೇಕು ಎಂಬ ರಣತಂತ್ರ ರೂಪಿಸುವ ಹೊಣೆ ಹೊತ್ತುಕೊಂಡಿದ್ದಾರೆ.

ಕೆಸಿಆರ್‌ಗೆ ನಿರಾಶೆ:

ಕಾಂಗ್ರೆಸ್‌ ಮತ್ತು ಬಿಜೆಪಿಯೇತರ ಪಕ್ಷಗಳನ್ನು ಒಳಗೊಂಡ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟ ರಚಿಸಿ, ಕೇಂದ್ರದಲ್ಲಿ ಅಧಿಕಾರ ಚಲಾಯಿಸುವ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್‌ ಅವರ ಆಸೆಗೂ ಚುನಾವಣೋತ್ತರ ಸಮೀಕ್ಷೆ ಹೊಡೆತ ನೀಡಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು, ಪ್ರಾದೇಶಿಕ ಪಕ್ಷಗಳು ಈ ಬಾರಿ ಮಹತ್ವದ ಪಾತ್ರ ವಹಿಸುವ ಸುಳಿವಿತ್ತಿದ್ದವು. ಆದರೆ ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದಿವೆ.

ಇದರಿಂದಾಗಿ ಲೋಕಸಭೆ ಚುನಾವಣೆ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಮಹತ್ತರ ಪಾತ್ರ ವಹಿಸಲು ತಯಾರಿ ಆರಂಭಿಸಿದ್ದ ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರಿಗೆ ಚುನಾವಣೋತ್ತರ ಸಮೀಕ್ಷೆಗಳಿಂದ ಭಾರಿ ನಿರಾಶೆಯಾಗಿದೆ ಎಂದು ಮೂಲಗಳು ತಿಳಿಸಿವೆ. ‘ಎನ್‌ಡಿಎ ಅಥವಾ ಯುಪಿಎಗೆ ಬಹುಮತ ಸಿಗುವುದಿಲ್ಲ ಎಂದು ನಂಬಿದ್ದೆವು. ಅದನ್ನೇ ಹೇಳಿದ್ದೆವು. ಆದರೆ ಮತದಾನೋತ್ತರ ಸಮೀಕ್ಷೆಗಳಲ್ಲಿ ನಮ್ಮ ಕಲ್ಪನೆ ಸುಳ್ಳಾಗುತ್ತಿದೆ’ ಎಂದು ಪಕ್ಷದ ನಾಯಕರೊಯಬ್ಬರು ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಮಮತಾಗಿಲ್ಲ ಪಿಎಂ ಹುದ್ದೆ:

ನಾಯ್ಡು, ರಾವ್‌ ರೀತಿಯಲ್ಲೇ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದವರು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ಒಂದು ವೇಳೆ ಎನ್‌ಡಿಎಗೆ ಬಹುಮತ ಸಿಗದೇ ಹೋದಲ್ಲಿ ಕಾಂಗ್ರೆಸ್‌ ಮತ್ತು ಹಲವು ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ದೆಹಲಿ ಗದ್ದುಗೆ ಏರುವ ಆಸೆ ಮಮತಾ ಅವರದ್ದಾಗಿತ್ತು.

ಆದರೆ ಇದೀಗ ಚುನಾವಣೋತ್ತರ ಭವಿಷ್ಯಗಳು ಎನ್‌ಡಿಎಗೆ ಬಹುಮತ ಸಿಗಲಿದೆ ಎಂದು ಹೇಳಿರುವುದು ಮಮತಾ ಅವರ ಪ್ರಧಾನಿ ಹುದ್ದೆ ಏರುವ ಕನಸಿಗೆ ಪೆಟ್ಟು ನೀಡಿದೆ. ಹೀಗಾಗಿಯೇ ಅವರೀಗ ತಮ್ಮ ಆಸೆಗೆ ಸ್ವಲ್ಪ ಬ್ರೇಕ್‌ ಹಾಕಿ, ವಿಪಕ್ಷಗಳ ನಾಯಕರನ್ನು ಒಂದುಗೂಡಿಸುವ ಮೂಲಕ ಮುಂದಿನ ರಣತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.