ಅಯೋಧ್ಯೆ[ಮಾ.27]: ಕಳೆದ ವರ್ಷ ನಡೆದ ಮಧ್ಯಪ್ರದೇಶ, ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಹಿಂದೂ ಮಂತ್ರ ಜಪಿಸಿ ಯಶಸ್ವಿಯಾಗಿದ್ದ ಕಾಂಗ್ರೆಸ್‌, ಉತ್ತರಪ್ರದೇಶ ಲೋಕಸಭಾ ಚುನಾವಣೆಯಲ್ಲಿಯೂ ಇದೇ ತಂತ್ರಕ್ಕೆ ಶರಣಾಗಿದೆ. ಕೆಲ ದಿನಗಳ ಹಿಂದಷ್ಟೇ ಪ್ರಯಾಗ್‌ರಾಜ್‌ನಿಂದ ವಾರಾಣಸಿಯವರೆಗೆ ಗಂಗಾನದಿಯಲ್ಲಿ ಯಾತ್ರೆ ಕೈಗೊಂಡು ಜನರ ಮನಗೆಲ್ಲುವ ಯತ್ನ ಮಾಡಿದ್ದ ಪ್ರಿಯಾಂಕಾ ಗಾಂಧಿ, ಇದೀಗ ದಿಢೀರನೆ ರಾಮಭಕ್ತೆಯಾಗಿ ಹೊರಹೊಮ್ಮಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪಕ್ಷದ ಅಧ್ಯಕ್ಷ ರಾಹುಲ್‌ಗಾಂಧಿಗೆ ಶಿವಭಕ್ತನ ಪಟ್ಟಕಟ್ಟಿದ್ದ ಕಾಂಗ್ರೆಸ್ಸಿಗರು, ಇದೀಗ ಪ್ರಿಯಾಂಕಾರನ್ನು ರಾಮಭಕ್ತೆಯಾಗಿ ಬಿಂಬಿಸುವ ಪೋಸ್ಟರ್‌ಗಳನ್ನು ರಾಮನ ಜನ್ಮ ಸ್ಥಳವಾದ ಆಯೋಧ್ಯೆಯ ಹಲವು ಸ್ಥಳಗಳಲ್ಲಿ ಪ್ರದರ್ಶಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಬುಧವಾರ ಅಯೋಧ್ಯೆಗೆ ಭೇಟಿ ನೀಡಲಿದ್ದು, ಅದಕ್ಕೆ ಮೊದಲು ಈ ಪೋಸ್ಟರ್‌ಗಳು ಎಲ್ಲೆಡೆ ಕಾಣಿಸಿಕೊಂಡಿವೆ. ಇದು ರಾಜ್ಯದಲ್ಲಿ ಎಸ್ಪಿ- ಬಿಎಸ್‌ಪಿ ಮೈತ್ರಿಕೂಟ ಮತ್ತು ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್‌ನ ಹೊಸ ರಣತಂತ್ರ ಎಂದೇ ವಿಶ್ಲೇಷಿಸಲಾಗಿದೆ.

ಈ ನಡುವೆ ಪ್ರಿಯಾಂಕಾರ ಈ ಹೊಸ ಅವತಾರವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ. 2007ರಲ್ಲಿ ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದ ಕಾಂಗ್ರೆಸ್‌ ನಾಯಕರು ಇದೀಗ ಇದ್ದಕ್ಕಿದ್ದಂತೆ ರಾಮನ ಭಕ್ತರಾಗಿ ಹೊರಹೊಮ್ಮಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ರಾಮಭಕ್ತೆ ಪ್ರಿಯಾಂಕಾ:

ಅಯೋಧ್ಯೆ ಸೇರಿದಂತೆ ರಾಜ್ಯದ ಕೆಲ ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಪ್ರಿಯಾಂಕಾರನ್ನು ರಾಮಭಕ್ತೆಯೆಂದು ಬಿಂಬಿಸುವ ಪೋಸ್ಟರ್‌ಗಳು ದಿಢೀರನೆ ಪ್ರಕಟವಾಗಿವೆ. ಈ ಪೋಸ್ಟರ್‌ನ ಒಂದು ತುದಿಯಲ್ಲಿ ಪ್ರಿಯಾಂಕಾ ಫೋಟೋ ಇದ್ದರೆ, ಮತ್ತೊದು ತುದಿಯಲ್ಲಿ ರಾಹುಲ್‌ ಫೋಟೋ ಮುದ್ರಿಸಲಾಗಿದೆ. ಇಬ್ಬರ ನಡುವೆ ರಾಮನ ದೊಡ್ಡ ಫೋಟೋ ಹಾಕಲಾಗಿದೆ. ಜೊತೆಗೆ ಫೋಟೋದ ಕೆಳಗೆ ಅಯೋಧ್ಯೆಯ ಹನುಮಾನ್‌ಗಢಿ ಮಂದಿರಕ್ಕೆ ಆಗಮಿಸುತ್ತಿರುವ ರಾಮಭಕ್ತೆ ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರಿಗೆ ಅಭಿನಂದನೆಗಳು ಎಂದು ಬರೆಯಲಾಗಿದೆ. ಇದೂ ರಾಜ್ಯದ ಹಿಂದೂ ಮತಗಳನ್ನು ಸೆಳೆಯಲು ಕಾಂಗ್ರೆಸ್‌ ಅನುಸರಿಸುತ್ತಿರುವ ಹೊಸ ತಂತ್ರ ಎಂದೇ ಹೇಳಲಾಗಿದೆ. ಇದಕ್ಕೂ ಮುನ್ನ ರಾಹುಲ್‌ ಅವರನ್ನೂ ರಾಮಭಕ್ತ ಎಂದು ಬಣ್ಣಿಸುವ ಪೋಸ್ಟರ್‌ಗಳು ಕೂಡಾ ಕಾಣಿಸಿಕೊಂಡಿದ್ದವು.

ಈ ಹಿಂದೆ ಮಧ್ಯಪ್ರದೇಶ, ರಾಜಸ್ಥಾನ ಚುನಾವಣೆಗಳ ವೇಳೆ ರಾಹುಲ್‌ ಗಾಂಧಿ ಅವರನ್ನು ಶಿವಭಕ್ತ ಎಂದು ಬಣ್ಣಿಸುವ ಪೋಸ್ಟರ್‌ಗಳು ಎಲ್ಲೆಡೆ ಕಾಣಿಸಿಕೊಂಡಿದ್ದವು.

ದೇಗುಲ ಭೇಟಿ:

ಪಶ್ಚಿಮ ಉತ್ತರಪ್ರದೇಶ ಕಾಂಗ್ರೆಸ್‌ ಉಸ್ತುವಾರಿಯೂ ಆಗಿರುವ ಪ್ರಿಯಾಂಕಾ ಗಾಂಧಿ ಬುಧವಾರ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಅಯೋಧ್ಯೆಯು, ಫೈಜಾಬಾದ್‌ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತಿದ್ದು, ಈ ಕ್ಷೇತ್ರದ ಪ್ರಚಾರದ ಜತೆಗೆ ಅವಧ್‌ ಪ್ರದೇಶದ ಕಾಂಗ್ರೆಸ್‌ ಚುನಾವಣಾ ಪ್ರಚಾರಕ್ಕೂ ಈ ವೇಳೆ ಪ್ರಿಯಾಂಕಾ ಚಾಲನೆ ನೀಡಲಿದ್ದಾರೆ. ಪ್ರಿಯಾಂಕಾ ಅವರು ಈ ಪ್ರವಾಸದ ವೇಳೆ ಅಯೋಧ್ಯೆಯ ಹನುಮಾನ್‌ಗಢಿ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಅಯೋಧ್ಯೆ ಹಾಗೂ ಫೈಜಾಬಾದ್‌ನಲ್ಲಿ ಮಧ್ಯಾಹ್ನ ರೋಡ್‌ ಶೋ ಹಾಗೂ ಕಾರ್ನರ್‌ ಮೀಟಿಂಗ್‌ಗಳನ್ನು ನಡೆಸಲಿದ್ದಾರೆ ಎಂದು ಅಯೋಧ್ಯಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಪಿ. ಸಿಂಗ್‌ ತಿಳಿಸಿದ್ದಾರೆ.