ಮಂಡ್ಯ[ಏ.20]: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರದ ಗಮನ ಸೆಳೆದಿರುವ ಮಂಡ್ಯ ಕ್ಷೇತ್ರದಲ್ಲಿ ಗೆಲ್ಲುವವರು ಯಾರು?

ಚುನಾವಣೆ ಮುಗಿಯುತ್ತಿದ್ದಂತೆ ಸೋಲು-ಗೆಲುವಿನ ಕುರಿತ ಲೆಕ್ಕಾಚಾರ ಶುರುವಾಗಿದೆ. ಅದರಲ್ಲೂ ಮಂಡ್ಯ ಕ್ಷೇತ್ರದಲ್ಲಿ ಅಭಿಮಾನಿಗಳ ನಡುವೆ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದು, ಕೆಲವರಂತು ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿಯೇ ಗೆಲ್ಲಬಹುದು ಬೇಕಿದ್ದರೆ ಬೆಟ್‌ ಕಟ್ಟುತ್ತೇನೆ ಅಂದ್ರೆ, ಇದಕ್ಕೆ ಪ್ರತಿ ಸವಾಲು ಹಾಕುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಬೆಂಬಲಿಗರು ಸಾಧ್ಯನೇ ಇಲ್ಲ, ಗೆಲ್ಲೋದು ಸುಮಕ್ಕನೇ ಎಂದು ಬಾಜಿ ಕಟ್ಟಿಕೊಳ್ಳುತ್ತಿದ್ದಾರೆ.

ಮತದಾನಕ್ಕೂ ಮೊದಲೇ ಇಬ್ಬರು ಅಭ್ಯರ್ಥಿಗಳಲ್ಲಿ ಯಾರು ಗೆಲ್ತಾರೆ ಎಂದು ಬೆಟ್ಟಿಂಗ್‌ ಆರಂಭವಾಗಿತ್ತು. ಈಗ ಬೆಟ್ಟಿಂಗ್‌ ಭರಾಟೆ ಮುಗಿಲು ಮುಟ್ಟಿದೆ. ನಗದು ಮಾತ್ರವಲ್ಲದೆ, ಕುರಿ, ಕೋಳಿ, ಜೋಡೆತ್ತುಗಳು, ಹಸು ಹಾಗೂ ಕೆಲವರಂತು ಜಮೀನನ್ನೂ ಬೆಟ್ಟಿಂಗ್‌ನಲ್ಲಿ ಪಣಕ್ಕಿಟ್ಟಿದ್ದಾರೆಂದು ಹೇಳಲಾಗುತ್ತಿದೆ. ನಮ್ಮ ಅಭ್ಯರ್ಥಿಯೇ ಗೆಲ್ಲುತ್ತಾರೆ, ಬೇಕಿದ್ರೆ ಇಷ್ಟುಬೆಟ್‌ ಕಟ್ತೇನೆ ನೋಡು ಎಂಬ ಬಹಿರಂಗ ಪಂಥಾಹ್ವಾನವೂ ಜಿಲ್ಲೆಯಲ್ಲಿ ಜೋರಾಗಿ ನಡೆಯುತ್ತಿದೆ.