ಹಾಸನ[ಮಾ.23]: ಅಪಾರ ದೈವಭಕ್ತಿಯನ್ನು ಹೊಂದಿರುವ, ಪ್ರತಿಯೊಂದು ಕೆಲಸವನ್ನೂ ವಾಸ್ತು ಪ್ರಕಾರ ಮಾಡುವ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್‌ ರೇವಣ್ಣ ಅವರು ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ರಾಹುಕಾಲ ಮುಗಿದ ನಂತರವೇ ಅಂದರೆ ಶುಕ್ರವಾರ ಮಧ್ಯಾಹ್ನ 12.36ಕ್ಕೆ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮುನ್ನ ಬೆಳಗ್ಗೆಯಿಂದಲೂ ಹೊಳೆನರಸೀಪುರ ಪಟ್ಟಣದ ಶ್ರೀ ಲಕ್ಷ್ಮೇನರಸಿಂಹಸ್ವಾಮಿ, ಎದುರು ಮುಖ ಆಂಜನೇಯಸ್ವಾಮಿ, ಶ್ರೀ ರಾಘವೇಂದ್ರ ಮತ್ತು ಹರದನಹಳ್ಳಿ ಇರುವ ಮನೆದೇವ್ರು ಈಶ್ವರ ಮತ್ತು ಮಾವಿನಕೆರೆ ರಂಗನಾಥ ಬೆಟ್ಟದಲ್ಲಿ ಇರುವ ಲಕ್ಷ್ಮೇ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ತಮ್ಮ ತಂದೆ ರೇವಣ್ಣ, ತಾಯಿ ಭವಾನಿ ಅವರೊಂದಿಗೆ ತೆರಳಿ ಪೂಜೆ ಸಲ್ಲಿಸಿದರು.

ಬಿ ಫಾರಂ ಇಟ್ಟು ಪೂಜೆ:

ನಾನಾ ಕಡೆ ಪೂಜೆ ಸಲ್ಲಿಸಿದ ವೇಳೆ ಸಚಿವ ರೇವಣ್ಣನವರು, ಹರದನಹಳ್ಳಿಯ ಶಿವನ ದೇವಾಲಯ ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲಿ ಬಿ ಫಾರಂ ಮತ್ತು ನಾಮಪತ್ರದ ಪ್ರತಿ ಇಟ್ಟು ಪೂಜೆ ಸಲ್ಲಿಸಿದರು.

ಹೊಳೆನರಸೀಪುರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇಗುಲದಲ್ಲಿ ರೇವಣ್ಣ ಅವರು ಎರಡೆರಡು ಬಾರಿ ಈಡುಗಾಯಿ ಒಡೆದರು. ಪ್ರಜ್ವಲ್‌ ರೇವಣ್ಣ ಮೊದಲ ಪ್ರಯತ್ನದಲ್ಲೇ ಈಡುಗಾಯಿ ಒಡೆದರೂ ರೇವಣ್ಣರಿಗೆ ಇದು ಸಾಧ್ಯವಾಗಲಿಲ್ಲ. ಹೀಗಾಗಿ ಎರಡನೇ ಪ್ರಯತ್ನದಲ್ಲಿ ಈಡುಗಾಯಿ ಒಡೆಯುವಲ್ಲಿ ಯಶಸ್ವಿಯಾದರು. ಈ ಹಿನ್ನೆಲೆಯಲ್ಲಿ ರೇವಣ್ಣ ಕೊಂಚ ಗರಂ ಆಗಿದ್ದರು. ನಂತರ ಕಾಂಗ್ರೆಸ್‌-ಜೆಡಿಎಸ್‌ ಜಂಟಿ ಪ್ರಚಾರ ಸಭೆಯಲ್ಲಿ ರೇವಣ್ಣನವರು ವೇದಿಕೆಯಲ್ಲಿ ಆಸೀನರಾಗಿದ್ದ ಕುಮಾರಸ್ವಾಮಿ ಸೇರಿದಂತೆ ಎಲ್ಲ ಗಣ್ಯರಿಗೂ ಕುಂಕುಮ ನೀಡಿದ್ದು ವಿಶೇಷವಾಗಿತ್ತು.

ಬರಿಗಾಲಲ್ಲಿ ನಡೆದ ಪ್ರಜ್ವಲ್‌:

ಹಿಂದಿನಿಂದಲೂ ರೇವಣ್ಣನವರ ಕುಟುಂಬ ಮನೆಯಿಂದ ದೇವಾಲಯಗಳಿಗೆ ಹೋದರೆ ಪಾದರಕ್ಷೆ ಹಾಕುವುದಿಲ್ಲ. ಆದರೆ ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಸುವ ವೇಳೆಯೂ ಪಾದರಕ್ಷೆ ಹಾಕದೇ ಇದ್ದದ್ದು ವಿಶೇಷವಾಗಿತ್ತು.

350 ಕೆಜಿ ಸೇಬಿನ ಹಾರ!

ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಎನ್‌.ಆರ್‌.ವೃತ್ತದಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗಾಗಿ 350 ಕೆ.ಜಿ.ಸೇಬಿನ ಹಾರವನ್ನು ಮುಸ್ಲಿಂ ಮುಖಂಡರು ತರಿಸಿದ್ದರು. ದೇವೇಗೌಡರು ವಿಳಂಬವಾಗಿ ಸಮಾವೇಶಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಪ್ರಜ್ವಲ್‌ ರೇವಣ್ಣ, ಸಚಿವ ರೇವಣ್ಣ , ಶಾಸಕ ಎ.ಟಿ.ರಾಮಸ್ವಾಮಿ ಅವರಿಗೆ ಈ ಹಾರ ಹಾಕಲಾಯಿತು.

2ನೇ ಬಾರಿ ನಾಮಪತ್ರ ಸಲ್ಲಿಕೆ

ಪ್ರಜ್ವಲ್‌ ರೇವಣ್ಣ ಅವರು 12.36ಕ್ಕೆ ನಾಮಪತ್ರ ಸಲ್ಲಿಸುವಾಗ ಅವರ ಜತೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೂಚಕರಾಗಿ ಸಹಿ ಮಾಡಿದರು. ಈ ವೇಳೆ ಸಚಿವ ಎಚ್‌.ಡಿ, ರೇವಣ್ಣ, ಭವಾನಿ ರೇವಣ್ಣ, ಕಾಂಗ್ರೆಸ್‌ ಮುಖಂಡರಾದ ಎಂಎಲ್ಸಿ ಎಂ.ವಿ.ಗೋಪಾಲಸ್ವಾಮಿ ಇದ್ದರು. ನಾಮಪತ್ರ ಸಲ್ಲಿಕೆ ವೇಳೆ 5 ಮಂದಿಗೆ ಮಾತ್ರ ಪ್ರವೇಶ ಎಂಬ ನಿಯಮ ಇರುವ ಕಾರಣ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಜಿಲ್ಲಾಧಿಕಾರಿಗಳ ಕಚೇರಿ ಹೊರಭಾಗದಲ್ಲೇ ಕುಳಿತಿದ್ದರು. ಈ ಹಿನ್ನೆಲೆಯಲ್ಲಿ ಪ್ರಜ್ವಲ್‌ ರೇವಣ್ಣ ಅವರು ಮಧ್ಯಾಹ್ನ 2.30ಕ್ಕೆ ತಾತ ದೇವೇಗೌಡ, ತಂದೆ ಎಚ್‌.ಡಿ. ರೇವಣ್ಣ, ಸಹೋದರ ಸೂರಜ್‌ ಅವರೊಂದಿಗೆ ಆಗಮಿಸಿ ಮತ್ತೊಂದು ಸೆಟ್‌ ನಾಮಪತ್ರವನ್ನು ಚುನಾವಣಾಧಿಕಾರಿಗೆ ಸಲ್ಲಿಸಿದರು.