ಮಂಡ್ಯ[ಮಾ.30]: ಮೈಕ್‌ ಮುಂದೆ ಟವೆಲ್‌ ಹಾಕಿಕೊಂಡು ಅಳುವ ಜನ ನಾವಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ಅಂಬರೀಷ್‌ ಪುತ್ರ ಅಭಿಷೇಕ್‌ಗೌಡ ಪರೋಕ್ಷವಾಗಿ ತಿರುಗೇಟು ನೀಡಿದರು. ಮದ್ದೂರು ತಾಲೂಕಿನ ಮರಳಿಗ ಗ್ರಾಮದಲ್ಲಿ ಮಾತನಾಡಿದ ಅಭಿಷೇಕ್‌, ಸುಮಲತಾ ಅವರ ಮುಖದಲ್ಲಿ ನೋವು ಕಾಣುತ್ತಿಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಹಾಗಾದರೆ ನಾವು, ನಿಮ್ಮಂತೆ ಟವೆಲ್‌ ಹಾಕಿಕೊಂಡು ಮೈಕ್‌ ಮುಂದೆ ಅಳಬೇಕು ಎಂದು ಅರ್ಥವೇ? ನಾವು ಅಳುವ ಜನ ಅಲ್ಲ. ಅಳಲು ನೀವಿರುವಾಗ ನಾವೇಕೆ ಅಳಬೇಕು ಎಂದು ಪ್ರಶ್ನೆ ಮಾಡಿದರು.

ನಾನು ಮಂಡ್ಯದ ಮಗ:

ನಾನು ನಿನ್ನೆ, ಮೊನ್ನೆ ಮಂಡ್ಯಕ್ಕೆ ಬಂದಿಲ್ಲ. ಒಂದು ಹುಡುಗಿಯನ್ನು ಮದುವೆ ಆಗಿ ಮಂಡ್ಯದವನು ಆಗಬೇಕಾದ ಅವಶ್ಯಕತೆ ನಂಗೆ ಇಲ್ಲ. ನಾನು ಮಂಡ್ಯದ ಅಳಿಯನಲ್ಲ. ನಾನು ಮಂಡ್ಯದ ಮಗ ಎಂದು ನಿಖಿಲ್‌ಗೂ ಅಭಿಷೇಕ್‌ ಭರ್ಜರಿಯಾಗಿ ಟಾಂಗ್‌ ಕೊಟ್ಟರು.

ಈ ಚುನಾವಣೆಯು ನೇರ ಯುದ್ಧ ಇದ್ದಂತೆ. ಅವರಿಗೆ ಗೆಲ್ಲುವುದಕ್ಕೆ ಆಗೋಲ್ಲಾ ಎಂಬುದು ಅರ್ಥ ಆಗಿದೆ. ಅದಕ್ಕಾಗಿ ಮೂರು ಜನ ಸುಮಲತಾ ಅವರನ್ನು ಚುನಾವಣೆಯಲ್ಲಿ ನಿಲ್ಲಿಸಿದ್ದಾರೆ. ಇದೆಲ್ಲಾ ಒಂದು ಗಿಮಿಕ್‌ ಅಷ್ಟೆ ಎಂದು ಮುಗುಳ್ನಕ್ಕರು.