ನವದೆಹಲಿ: 17 ನೇ ಲೋಕಸಭೆ ರಚನೆಗೆ ನಡೆಸಲಾಗುತ್ತಿರುವ  7 ಹಂತದ ಚುನಾವಣೆ ಪೈಕಿ 4 ನೇ ಹಂತದ ಚುನಾವಣೆ ಸೋಮವಾರ ನಡೆಯಲಿದೆ. 9 ರಾಜ್ಯಗಳ 72 ಲೋಕಸಭಾ ಕ್ಷೇತ್ರಗಳಲ್ಲಿ 943 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಶಾಂತಿಯುತ ಚುನಾವಣಾ ಪ್ರಕ್ರಿಯೆಗಾಗಿ ಕೇಂದ್ರ ಚುನಾವಣಾ ಆಯೋಗವು ಭಾರೀ ಬಿಗಿ ಬಂದೋಬಸ್ತ್ ಏರ್ಪಡಿಸಿದೆ.

ಇನ್ನು ಕೇಂದ್ರದಲ್ಲಿ ಮತ್ತೊಮ್ಮೆ ಗದ್ದುಗೆ ಗೇರಲು ಪ್ರಯತ್ನ ನಡೆಸುತ್ತಿರುವ ಬಿಜೆಪಿಗೆ ಸೋಮ ವಾರದಿಂದ ಆರಂಭವಾಗಲಿರುವ 4 ನೇ ಹಂತದ ಚುನಾವಣೆಯಿಂದ ಅಸಲಿ ಸತ್ವ ಪರೀಕ್ಷೆ ಎದುರಾಗಲಿದೆ. ಕಾರಣ ಕಳೆದ ಬಾರಿ ಬಿಜೆಪಿ ಒಟ್ಟು ಗೆದ್ದಿದ್ದ  282 ಸ್ಥಾನಗಳ ಪೈಕಿ 161 ಸ್ಥಾನಗಳು, ಸೋಮವಾರದಿಂದ ನಡೆಯಲಿರುವ ಕಡೆಯ 4 ಹಂತದ ಚುನಾವಣೆಯಲ್ಲಿ ಚುನಾವಣೆ ಎದುರಿಸಲಿರುವ ಕ್ಷೇತ್ರಗಳಾಗಿವೆ. ಹೀಗಾಗಿ ಉಳಿದ ನಾಲ್ಕು ಹಂತಗಳು ಬಿಜೆಪಿ ಪಾಲಿಗೆ ಅಗ್ನಿ ಪರೀಕ್ಷೆಯಾಗಿವೆ. ಇನ್ನು ಅದೇ ರೀತಿಯ ಬಿಜೆಪಿ ಓಟಕ್ಕೆ ಬ್ರೇಕ್ ಹಾಕಲು ವಿಪಕ್ಷಗಳು ಮೈತ್ರಿಕೂಟದ ಯತ್ನಮಾಡಿದ್ದವಾದರೂ ಅದು ಫಲ ಕೊಟ್ಟಿಲ್ಲ.

ಇದಕ್ಕೆ ಪ್ರಮುಖ ಕಾರಣ, ಪಶ್ಚಿಮ ಬಂಗಾಳದಲ್ಲಿನ ಟಿಎಂಸಿ, ಉತ್ತರಪ್ರದೇಶ ದಲ್ಲಿ ಎಸ್‌ಪಿ- ಬಿಎಸ್‌ಪಿ, ಒಡಿಶಾದಲ್ಲಿ ಬಿಜೆಡಿ ಪ್ರತ್ಯೇಕವಾಗಿ ಸ್ಪರ್ಧಿಸಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವುದು. ಹೀಗಾಗಿ ಕಡೆಯ 4 ಹಂತದ ಚುನಾವಣೆ ಬಿಜೆಪಿ ಯಷ್ಟೇ, ಟಿಎಂಸಿ, ಬಿಜೆಡಿ, ಎಸ್‌ಪಿ- ಬಿಎಸ್‌ಪಿ ಮೈತ್ರಿಕೂಟ ಹಾಗೂ ಕಾಂಗ್ರೆಸ್ ಪಾಲಿಗೂ ಅತ್ಯಂತ ಮಹತ್ವದ್ದಾಗಿದೆ.

ಎಲ್ಲೆಲ್ಲಿ ಚುನಾವಣೆ: ಸೋಮವಾರ ಬಿಹಾ ರದ 5, ಜಮ್ಮು-ಕಾಶ್ಮೀರದ 1, ಜಾರ್ಖಂಡ್ 3, ಮಧ್ಯಪ್ರದೇಶದ 6, ಮಹಾರಾಷ್ಟ್ರದ 17, ಒಡಿಶಾದ 6, ರಾಜಸ್ಥಾನದ 13, ಉತ್ತರ ಪ್ರದೇಶದ 13 ಮತ್ತು ಪಶ್ಚಿಮ ಬಂಗಾಳದ 8 ಲೋಕಸಭಾ ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದೆ. 

ಪ್ರಮಖ ಹುರಿಯಾಳುಗಳು: 4 ನೇ ಹಂತ ದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿರುವ ನಾಯಕರೆಂದರೆ ಕೇಂದ್ರ ಸಚಿವ ಬಿಜೆಪಿಯ ಗಿರಿರಾಜ್‌ಸಿಂಗ್, ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ, ಕೇಂದ್ರ ಸಚಿವ ಎಸ್.ಎಸ್. ಅಹ್ಲುವಾಲಿಯಾ, ಬಿಜೆಪಿಯ ಭೈಜಯಂತ್ ಪಾಂಡಾ, ಸಾಕ್ಷಿ ಮಹಾರಾಜ್, ಜೆಎನ್‌ಯು ವಿದ್ಯಾರ್ಥಿ ನಾಯಕ, ಸಿಪಿಐನ ಕನ್ಹಯ್ಯಾ ಕುಮಾರ್, ಕೇಂದ್ರದ ಮಾಜಿ ಸಚಿವ ಉಪೇಂದ್ರ ಕುಶ್ವಾಹ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್‌ರ ಪತ್ನಿ ಡಿಂಪಲ್, ಕಾಂಗ್ರೆಸ್ನಿಂದ ಮಧ್ಯಪ್ರದೇಶ ಸಿಎಂ ಕಮಲ್‌ನಾಥ್‌ರ ಪುತ್ರ ನಕುಲ್‌ನಾಥ್, ಮಿಲಿಂದ್ ದೇವೋರಾ, ಪ್ರಿಯಾ ದತ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್‌ರ ಪುತ್ರ ವೈಭವ್ ಗೆಹ್ಲೋಟ್, ಸಲ್ಮಾನ್ ಖುರ್ಷಿದ್, ಟಿಎಂಸಿಯ ಮೂನ್‌ಮೂನ್ ಸೇನ್ ಮೊದಲಾದವರ ಪ್ರಮುಖರಾಗಿದ್ದಾರೆ.