ಬೆಂಗಳೂರು :  ವಾಣಿಜ್ಯ ವ್ಯವಹಾರ ಕುಸಿತ, ಬಸ್‌, ಮೆಟ್ರೋಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖ, ರಸ್ತೆಗಳಲ್ಲಿ ಕಾಣದ ವಾಹನ ದಟ್ಟಣೆ, ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಕೊರತೆ, ಸಾಕಷ್ಟು ಬಸ್‌ ಇಲ್ಲದೇ ಪ್ರಯಾಣಿಕರ ಪರದಾಟ! ಒಂದು ರೀತಿಯಲ್ಲಿ ಬಂದ್‌ನಂತಹ ವಾತಾವರಣ! ಇವು ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಂಡುಬಂದ ದೃಶ್ಯಾವಳಿಗಳು.

ಗುರುವಾರ ನಡೆದ ಲೋಕಸಭಾ ಚುನಾವಣೆ ವೇಳೆಯಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಭಾಗಶಃ ಬಂದ್‌ ವಾತಾವರಣ ಕಂಡು ಬಂತು. ಸರ್ಕಾರಿ ಮತ್ತು ಬ್ಯಾಂಕ್‌ ನೌಕರರಿಗೆ ಸಾಲು ಸಾಲು ರಜೆಗಳು, ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ, ಮತದಾನಕ್ಕಾಗಿ ಖಾಸಗಿ ಕಂಪನಿಗಳು ಸಹ ರಜೆ ಘೋಷಿಸಿದ್ದರಿಂದ ನಗರದಲ್ಲಿ ವಾಹನ ದಟ್ಟಣೆ ಇಳಿಮುಖವಾಗಿತ್ತು. ಇದರಿಂದ ಸದಾ ಗಿಜಿಗಿಡುತ್ತಿದ್ದ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಸಾಕಷ್ಟುಕಡಿಮೆಯಾಗಿತ್ತು.

ನಾಗರಬಾವಿ, ವಿಜಯನಗರ, ವೆಸ್ಟ್‌ಆಫ್‌ ಕಾರ್ಡ್‌ರೋಡ್‌, ಎಂ.ಜಿ.ರಸ್ತೆ, ವಾಟಾಳ್‌ ನಾಗರಾಜ್‌ ರಸ್ತೆ, ಬಳ್ಳಾರಿ ರಸ್ತೆ, ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ, ಚಾಮರಾಜಪೇಟೆ, ಸದಾಶಿವ ನಗರ, ಡಾ.ರಾಜಾರಾಮ್‌ ರಸ್ತೆ, ಜಯಮಹಲ್‌ ರಸ್ತೆ, ಬೊಮ್ಮನಹಳ್ಳಿ, ಜಯನಗರ, ಬಸವನಗುಡಿ, ಜೆ.ಪಿ.ನಗರ, ಮಡಿವಾಳ ಸೇರಿದಂತೆ ಬಹುತೇಕ ರಸ್ತೆಗಳು ವಾಹನಗಳ ಸಂಚಾರ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರಲಿಲ್ಲ. ಆದರೆ, ಗಾಂಧಿನಗರ, ಯಶವಂತಪುರ, ಮೈಸೂರು ರಸ್ತೆ, ಹೊಸೂರು ರಸ್ತೆ, ಹಳೇ ವಿಮಾನ ನಿಲ್ದಾಣ ರಸ್ತೆ ಮುಂತಾದ ಕಡೆಗಳಲ್ಲಿ ಸ್ವಲ್ಪ ಮಟ್ಟಿಗೆ ವಾಹನ ದಟ್ಟಣೆ ಮತ್ತು ಜನ ಸಂಚಾರವೂ ಇದ್ದದ್ದು ಹೊರತು ಪಡಿಸಿದರೆ ಅತಿಯಾದ ದಟ್ಟಣೆ ನಗರದಲ್ಲೆಲ್ಲೂ ಕಂಡು ಬರಲಿಲ್ಲ.

ಚುನಾವಣಾ ಕರ್ತವ್ಯಕ್ಕೆ ಬಹುತೇಕ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ನಿಯೋಜನೆಗೊಂಡಿದ್ದರಿಂದ ಬೆಂಗಳೂರು ಮಹಾನಗರದ ರಸ್ತೆಗಳು ಬಸ್‌ಗಳ ಅಬ್ಬರ ಕಡಿಮೆ ಇತ್ತು. ಇತರ ದಿನಗಳಲ್ಲಿ ಒಂದು ಗಂಟೆಗೆ ತಲುಪಬಹುದಾದ ದೂರವನ್ನು ಗುರುವಾರ ಯಾವುದೇ ಅಡೆತಡೆ ಇಲ್ಲದೇ ಕೇವಲ 20 ನಿಮಿಷಗಳಲ್ಲಿ ತಲುಪಬಹುದಿತ್ತು. ಹೆಬ್ಬಾಳದಿಂದ ಮೆಜೆಸ್ಟಿಕ್‌ಗೆ ಕೇವಲ 13 ನಿಮಿಷಕ್ಕೆ ಬಂದು ತಲುಪಿದ್ದೇನೆ. ಇದೇ ರೀತಿಯ ವಾತಾವರಣ ಬೆಂಗಳೂರಿನಲ್ಲಿ ಇದ್ದಿದ್ದರೆ ಎಷ್ಟುಚೆನ್ನಾಗಿತ್ತು ಅನ್ನಿಸುತ್ತಿದೆ ಎನ್ನುತ್ತಾರೆ ಹೆಬ್ಬಾಳ ನಿವಾಸಿ ಅತುಲ್‌.

ಮೆಜೆಸ್ಟಿಕ್‌, ಯಶವಂತಪುರದ ಯಾವಾಗಲೂ ಜನ ಮತ್ತು ವಾಹನ ದಟ್ಟಣೆಯಿಂದ ಕೂಡಿರುವ ಪ್ರದೇಶ. ಇಲ್ಲಿ ವಾಹನ ಪಾರ್ಕಿಂಗ್‌ ಇರಲಿ, ಐದು ನಿಮಿಷ ನಿಲ್ಲಲು ಕೂಡ ಅವಕಾಶ ಸಿಗುವುದಿಲ್ಲ. ಆದರೆ ಇಂದು ನಮ್ಮ ಕಾರ್‌ ಪಾರ್ಕ್ ಮಾಡಲು ಜಾಗ ಸಿಕ್ಕಿದ್ದು ಖುಷಿಯಾಗುತ್ತಿದೆ. ಇದರಿಂದ ವೋಟ್‌ ಮಾಡಲು ತುಮಕೂರಿಗೆ ಹೊರಟಿದ್ದ ನಮ್ಮ ಮಾವ, ಅತ್ತೆಯವರನ್ನು ರೈಲ್ವೆ ನಿಲ್ದಾಣಕ್ಕೆ ಡ್ರಾಪ್‌ ಮಾಡಲು ಸುಲಭವಾಗಿದೆ ಎಂದು ಶೋಭಾ ಪಾಟೀಲ್‌ ತಮ್ಮ ಖುಷಿ ವ್ಯಕ್ತಪಡಿಸಿದರು.

ವಹಿವಾಟು ಕುಸಿತ:

ಬೆಂಗಳೂರಿನ ಶೇ.40ಕ್ಕಿಂತ ಹೆಚ್ಚು ಜನರು ಮತದಾನ, ಪ್ರವಾಸ, ಪಿಕ್‌ನಿಕ್‌, ರಜೆ ಹೀಗೆ ವಿವಿಧ ಕಾರಣಗಳಿಂದ ಪರ ಊರುಗಳಿಗೆ ತೆರಳಿದ್ದರಿಂದ ಗುರುವಾರ ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿ, ಹೂವಿನ ವಹಿವಾಟಿನಲ್ಲಿ ಭಾರೀ ಕುಸಿತ ಕಂಡುಬಂದಿದೆ. ಬೀದಿ ಬದಿ ವ್ಯಾಪಾರ, ಸಣ್ಣ ಅಂಗಡಿಗಳಲ್ಲಿ ಹೇಳಿಕೊಳ್ಳುವಂತ ವ್ಯಾಪಾರ ಆಗಿಲ್ಲ. ದಿನಕ್ಕೆ ಸೊಪ್ಪು ಮಾರಾಟದಿಂದಲೇ .500 ಸಂಪಾದನೆ ಮಾಡುತ್ತಿದ್ದು. ಇಂದು .500 ದಾಟಿಲ್ಲ ಎಂದು ಹಲವು ವರ್ಷಗಳಿಂದ ಸೊಪ್ಪು ಮಾರಾಟ ಮಾಡುತ್ತಿರುವ ಕವಿತಾ ಬೇಸರ ವ್ಯಕ್ತಪಡಿಸಿದರು.

ಬೆಳಗ್ಗೆ ಭರ್ತಿ, ಮಧ್ಯಾಹ್ನ ಖಾಲಿ!

ಇದು ಕೇವಲ ಮಾರುಕಟ್ಟೆಯದ್ದು ಮಾತ್ರವಲ್ಲ ಹೋಟೆಲ್‌ಗಳಲ್ಲೂ ಇಂತಹದ್ದೇ ಪರಿಸ್ಥಿತಿ. ಬೆಳಗ್ಗೆ ಮತದಾನಕ್ಕೆ ಹೋದ ಹಲವರು ನೇರವಾಗಿ ಹೋಟೆಲ್‌ಗಳಿಗೆ ಬಂದು ಉಪಹಾರ ಸೇವಿಸಿದ್ದರಿಂದ ಒಳ್ಳೆಯ ವ್ಯಾಪಾರವೇ ಆಗಿತ್ತು. ಸಂಜೆವರೆಗೂ ಇದೇ ಸ್ಥಿತಿ ಮುಂದುವರಿಯಬಹುದೆಂದು ನಿರೀಕ್ಷಿಸಿದ್ದ ಹೋಟೆಲ್‌ ಮಾಲೀಕರಿಗೆ ನಿರಾಸೆಯಾಗಿದೆ. ಉಪಹಾರದ ಬಳಿಕ ಹೋಟೆಲ್‌ ವ್ಯವಹಾರ ಭಾಗಶಃ ಕಡಿಮೆಯಾಗಿದೆ. ಆದರೆ ದೇಶದ ಹಿತದೃಷ್ಟಿಯಿಂದ ನಾವು ಒಪ್ಪಿಕೊಳ್ಳಲೇಬೇಕು ಎಂಬುದು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ್‌ ಹೆಬ್ಬಾರ್‌ ಅವರ ಅಭಿಪ್ರಾಯ.

ಮತದಾನಕ್ಕೆಂದು ಬೆಂಗಳೂರಿನ ಐಟಿ, ಬಿಟಿ ಮತ್ತು ಖಾಸಗಿ ಕಂಪನಿಗಳಿಗೆ ರಜೆ ಇತ್ತು. ಅಂತೆಯೇ ಇದೇ ಮೊದಲ ಬಾರಿಗೆ ಪ್ರಮುಖ ಆಭರಣ ಅಂಗಡಿಗಳು ತಮ್ಮ ಸಿಬ್ಬಂದಿಗೆ ರಜೆ ಘೋಷಣೆ ಮಾಡಿದ್ದರಿಂದ ಚಿನ್ನಾಭರಣ ವಹಿವಾಟು ಕೂಡ ನಡೆಯಲಿಲ್ಲ. ಆಟೋ ಮತ್ತು ಕ್ಯಾಬ್‌ ಸವಾರಿಗಳ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಕೆಲವೇ ಕೆಲವು ಬಿಎಂಟಿಸಿ ಬಸ್‌ಗಳು ಮಾತ್ರ ರಸ್ತೆಗೆ ಇಳಿಸಿದ್ದರಿಂದ ಹೊರ ಜಿಲ್ಲೆಗಳಿಂದ ಬೆಂಗಳೂರಿಗೆ ಬಂದ ಕೆಲವು ಪ್ರಯಾಣಿಕರು ಪರದಾಡುವಂತಾಯಿತು.