ನವದೆಹಲಿ[ಏ.17]: ಲೋಕಸಭೆಗೆ 2ನೇ ಹಂತದ ಮತದಾನ ಗುರುವಾರ ನಡೆಯಲಿದ್ದು, ಒಟ್ಟು 1644 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 427 ಅಭ್ಯರ್ಥಿಗಳು ಕೋಟ್ಯಧೀಶರಾಗಿದ್ದಾರೆ. ಇವರ ಪೈಕಿ ತಮಿಳುನಾಡಿನ ಕನ್ಯಾಕುಮಾರಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಸಂತ್‌ಕುಮಾರ್‌ 417 ಕೊಟಿ ರು. ಆಸ್ತಿಯೊಂದಿಗೆ ಅತ್ಯಂತ ಶ್ರಿಮಂತ ಅಭ್ಯರ್ಥಿ ಎನಿಸಿಕೊಂಡಿದ್ದಾರೆ ಎಂದು ಪ್ರಜಾಪ್ರಭುತ್ವ ಸುಧಾರಣಾ ಸಂಘಟನೆ ವರದಿ ತಿಳಿಸಿದೆ.

ಇನ್ನು ಬಿಹಾರದ ಪುರ್ನಿಯಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಉದಯ್‌ ಸಿಂಗ್‌ 341 ಕೊಟಿ ರು. ಆಸ್ತಿಯೊಂದಿಗೆ 2ನೇ ಶ್ರೀಮಂತ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಸುರೇಶ್‌ 338 ಕೋಟಿ ರು. ಆಸ್ತಿಯೊಂದಿಗೆ 3ನೇ ಶ್ರೀಮಂತ ಅಭ್ಯರ್ಥಿ ಎನ್ನಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಹಿಂದುಸ್ತಾನ ಜನತಾ ಪಕ್ಷದಿಂದ ಸ್ಪರ್ಧಿಸಿರುವ ಶ್ರೀವೆಂಕಟೇಶ್ವರ ಮಹಾಸ್ವಾಮಿಜಿ ಕೇವಲ 9 ರು. ಆಸ್ತಿಯೊಂದಿಗೆ ಅತಿ ಬಡವ ಅಭ್ಯರ್ಥಿ ಏನಿಸಿದ್ದಾರೆ. 16 ಅಭ್ಯರ್ಥಿಗಳು ತಾವು ಯಾವುದೇ ಆಸ್ತಿ ಹೊಂದಿಲ್ಲ ಎಂದು ಘೋಷಿಸಿಕೊಂಡಿದ್ದಾರೆ.

ಇನ್ನು ವಾರ್ಷಿಕ 1 ಕೋಟಿ ರು.ಗಿಂತ ಹೆಚ್ಚಿನ ಆದಾಯ ಇರುವುದಾಗಿ 41 ಅಭ್ಯರ್ಥಿಗಳು ಘೋಷಿಸಿಕೊಂಡಿದ್ದಾರೆ. ಈ ಪೈಕಿ ವಸಂತ್‌ ಕುಮಾರ್‌ ತಮಗೆ ವಾರ್ಷಿಕ 28 ಕೋಟಿ ರು., ಕರ್ನಾಟಕದ ಹಾಸನದ ಬಿಜೆಪಿ ಅಭ್ಯರ್ಥಿ ಎ.ಮಂಜು ತಮಗೆ ವಾರ್ಷಿಕ 12 ಕೋಟಿ ರು. ಆದಾಯ ಇರುವುದಾಗಿ ಘೋಷಿಸಿಕೊಂಡಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.