ನವದೆಹಲಿ: ಈ ಲೋಕಸಭೆ ಚುನಾವಣೆ ಜತೆ ಏಪ್ರಿಲ್‌ನಲ್ಲಿ 4 ರಾಜ್ಯಗಳ ವಿಧಾನಸಭೆಗಳಿಗೂ ಚುನಾವಣೆ ನಡೆಯಲಿದೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ವಿಧಾನಸಭೆಗಳು ಚುನಾವಣೆ ಎದುರಿಸಲಿವೆ. ಮೇ 23ರಂದು ಮತ ಎಣಿಕೆ ನಡೆಯಲಿದೆ.

ಆಂಧ್ರಪ್ರದೇಶದಲ್ಲಿ ಹಾಲಿ ಟಿಡಿಪಿ ಅಧಿಕಾರದಲ್ಲಿದ್ದು, ಏಪ್ರಿಲ್‌ 11ರಂದು 25 ಲೋಕಸಭೆ ಕ್ಷೇತ್ರಗಳ ಜತೆ 175 ವಿಧಾನಸಭೆ ಕ್ಷೇತ್ರಗಳಿಗೂ ಮತದಾನ ನಡೆಯಲಿದೆ. ಇಲ್ಲಿ ಟಿಡಿಪಿ ಹಾಗೂ ವೈಎಸ್ಸಾರ್‌ ಕಾಂಗ್ರೆಸ್‌ ನಡುವೆ ನೇರ ಸಮರ ನಡೆಯಲಿದೆ.

ಒಡಿಶಾಸಲ್ಲಿ ಬಿಜೆಡಿ ಈಗ ಅಧಿಕಾರದಲ್ಲಿದ್ದು, ಏಪ್ರಿಲ್‌ 11, 18, 23 ಹಾಗೂ 29ಕ್ಕೆ 4 ಹಂತದ ಚುನಾವಣೆ ನಡೆಯಲಿದೆ. 147 ಕ್ಷೇತ್ರಗಳಿಗೆ ನಡೆವ ಮತದಾನದಲ್ಲಿ ಬಿಜೆಡಿ, ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ತ್ರಿಕೋನ ಸ್ಪರ್ಧೆ ಇರಲಿದೆ.

ಇನ್ನು ಹಾಲಿ ಬಿಜೆಪಿ ಆಡಳಿತವಿರುವ ಅರುಣಾಚಲ ಪ್ರದೇಶದಲ್ಲಿ ಏಪ್ರಿಲ್‌ 11ರಂದು 60 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಕಾಂಗ್ರೆಸ್‌-ಬಿಜೆಪಿ ಮಧ್ಯೆ ಇಲ್ಲಿ ಸ್ಪರ್ಧೆಯಿದೆ.

ಸಿಕ್ಕಿಂನ 32 ವಿಧಾನಸಭಾ ಕ್ಷೇತ್ರಗಳಿಗೂ ಏಪ್ರಿಲ್‌ 11ರಂದು ಮತದಾನ ನಡೆಯಲಿದೆ. ಇಲ್ಲಿ ಈಗ ಎಸ್‌ಡಿಎಫ್‌ ಆಳ್ವಿಕೆ ಇದ್ದು, ಎಸ್‌ಕೆಎಂ ಕೂಟದಿಂದ ತೀವ್ರ ಪೈಪೋಟಿ ಎದುರಿಸುವ ಸಾಧ್ಯತೆ ಇದೆ.