ಬೆಂಗಳೂರು(ಏ.23): 17ನೇ ಲೋಕಸಭಾ ಚುನಾವಣೆಯ ದೇಶದ 3ನೇ ಹಂತದ ಮತದಾನ ಅಂತ್ಯವಾಗಿದ್ದು, ಕರ್ನಾಟಕದಲ್ಲಿ ಎರಡನೇ ಹಂತದ 14 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಮುಗಿದಿದೆ.

ಈ ಮೂಲಕ 2019ರ ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಕರ್ನಾಟಕದಲ್ಲಿ ಸಂಪೂರ್ಣ ಅಂತ್ಯ ಕಂಡಿದ್ದು, ಇದೀಗ ಎಲ್ಲರ ಚಿತ್ತ ಮೇ.23ರ ಫಲಿತಾಂಶದ ಮೇಲೆ ನಿಂತಿದೆ.

ಎರಡನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳ ಒಟ್ಟಾರೆ ಶೇ.67.21ರಷ್ಟು ಮತದಾನ ಆಗಿದೆ. ಇನ್ನು ಕೆಲವು ಸಣ್ಣ ಪ್ರಮಾಣದ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಮತದಾನ ಪ್ರಕ್ರಿಯೆ ಸಂಪೂರ್ಣ ಶಾಂತಿಯುತವಾಗಿತ್ತು ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಕೆಳಗೆ ಕೊಟ್ಟಿರುವ ಕೋಷ್ಠಕದಲ್ಲಿ ರಾತ್ರಿ 9 ಗಂಟೆಯ ಬಳಿಕ ಚುನಾವಣೆ ಆಯೋಗ ಶೇಕಡಾವಾರು ಮತದಾನದ ಪ್ರಮಾಣ ನೀಡಲಾಗಿದೆ.  

ಎಲ್ಲೆಲ್ಲಿ ಏನೆನಾಯ್ತು?:

ಗದಗ: ಮತದಾನ ‌ಕೊನೆ ಹಂತದಲ್ಲಿ ಗದ್ದಲ ನಡೆದ ಘಟನೆ ಗದಗನಲ್ಲಿ ನಡೆದಿದೆ. ಗದಗನ ಮಕಾನ್ ಗಲ್ಲಿಯಲ್ಲಿ ರಾಹುಲ್ ಗಾಂಧಿ ಚೋರ್ ಹೈ ಎಂದು ಬಿಜೆಪಿ ಕಾರ್ಯಕರ್ತರು ಕೂಗಿದರೆ, ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ಚೌಕಿದಾರ್ ಚೋರ್ ಹೈ ಎಂದು ಘೋಷಣೆ ಕೂಗಿದ್ದಾರೆ.

ಬಳ್ಳಾರಿ: ಇಲ್ಲಿನ ಕೌಲಬಜಾರನಲ್ಲಿ ಮತದಾನ ಪ್ರಕ್ರಿಯೆ ಕೊನೆ ಹಂತದಲ್ಲಿದ್ದಾಗ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ತಮ್ಮ ತಮ್ಮ ನಾಯಕರನ್ನು ಹೆಗಲ ಮೇಲೆ ಎತ್ತಿ ಹಿಡಿದು ಶಕ್ತಿ ಪ್ರದರ್ಶನಕ್ಕೆ ಮುಂದಾದರು. ಮತದಾನ ಮುಗಿದ ಬಳಿಕ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಉತ್ತರಕನ್ನಡ: ಇಲ್ಲಿನ ಬಾಡ ಮತಗಟ್ಟೆಯಲ್ಲಿ ನಿಗದಿತ ಸಮಯಕ್ಕಿಂತ ಮೊದಲೇ ಮತದಾನ ಸ್ಥಗಿತಗೊಳಿಸಿದ ಸಿಬ್ಬಂದಿ ನಿಲುವನ್ನು ಮತದಾರರು ತರಾಟೆಗೆ ತೆಗೆದುಕೊಂಡಿದ್ದಾರೆ.

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಕರಿಬಾವಿ ಗ್ರಾಮದ ಮತಗಟ್ಟೆ ಕೇಂದ್ರ 31 ರಲ್ಲಿ ಕಾಂಗ್ರೆಸ್ ಏಜೆಂಟ್ ಗುರುನಾಥ್ ಎಂಬುವನಿಂದ ಇವಿಎಂ ಯಂತ್ರ ಜಖಂಗೊಂಡಿದೆ. ಮತಗಟ್ಟೆ ಕೇಂದ್ರದಲ್ಲಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ಪರ ಮತ ಹಾಕುವಂತೆ ಒತ್ತಾಯಿಸಿದ್ದಕ್ಕೆ ಗುರುನಾಥ್ ಮತಯಂತ್ರವನ್ನು ಜಖಂಗೊಳಿಸಿದ್ದಾನೆ ಎನ್ನಲಾಗಿದೆ. ಕೆಲ ಗಂಟೆಗಳ ನಂತರ ಹೊಸ ಕಂಟ್ರೋಲ್ ಯುನಿಟ್ ಅಳವಡಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ.ಮೇ 23ರಂದು ನಾಯಕರ ಭವಿಷ್ಯ ಅನಾವರಣ:

ಕರ್ನಾಟಕದಲ್ಲಿ 2019ರ ಲೋಕಸಭೇ ಚುನಾವಣೆಯ ಮತದಾನ ಪ್ರಕ್ರಿಯೆ ಅಂತ್ಯವಾಗಿದ್ದು, ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆಂದು ತಿಳಿಯಲು ಮೇ 23ರವರೆಗೆ ಕಾಯಬೇಕಿದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏ.18ರಂದು ಮುಗಿದಿದ್ದು, ಏ.23 ರಂದು ಎರಡನೇ ಹಂತದ ಮತದಾನ ಮುಕ್ತಾಯ ಕಂಡಿದೆ. ನಡೆಯಲಿದೆ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.