ನವದೆಹಲಿ[ಮೇ.05]: ಬಿಡುವಿಲ್ಲದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಕ್ಕೆ ಖ್ಯಾತಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ, ಕಳೆದ 125 ದಿನಗಳ ಅವಧಿಯಲ್ಲಿ ದೇಶಾದ್ಯಂತ ಸುಮಾರು 200 ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

ಪ್ರಧಾನಿ ಕಾರ್ಯಾಲಯವೇ ನೀಡಿರುವ ಮಾಹಿತಿ ಅನ್ವಯ ಡಿ.25ರಿಂದ ಮೇ 1ರವರೆಗೆ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಚರಿಸಿದ ಪ್ರಧಾನಿ ಸುಮಾರು 200 ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಇವುಗಳಲ್ಲಿ ಪ್ರಮುಖವಾದ ಕೆಲ ಕಾರ್ಯಕ್ರಮಗಳೆಂದರೆ ಕುಂಭಮೇಳ, ರಾಷ್ಟ್ರೀಯ ಯುದ್ಧ ಸ್ಮಾರಕ ಉದ್ಘಾಟನೆ, ವಾರ್ಷಿಕ ಇಂಡಿಯನ್‌ ಕಾಂಗ್ರೆಸ್‌ ಕಾರ್ಯಕ್ರಮ ಉದ್ಘಾಟನೆ ಮೊದಲಾದವುಗಳು.

ಈ ಅವಧಿಯಲ್ಲಿ ಘೋಷಿಸಿದ ಕೆಲ ಪ್ರಮುಖ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ, ಪ್ರಧಾನ್‌ ಮಂತ್ರಿ ಶ್ರಮಯೋಗಿ ಮಾನ್‌ ಧನ್‌ ಯೋಜನೆ ಸೇರಿವೆ. 

ಇನ್ನು ಈ ವರ್ಷ ಇಲ್ಲಿಯವರೆಗೆ ಮೋದಿ 14 ಸಂಪುಟ ಸಭೆ ನಡೆಸಿದ್ದಾರೆ. ತಾವು ಲೋಕಸಭೆಯಲ್ಲಿ ಪ್ರತಿನಿಧಿಸುವ ವಾರಾಣಸಿ ಕ್ಷೇತ್ರಕ್ಕೆ ಕಳೆದ 150 ದಿನಗಳಲ್ಲಿ ಮೋದಿ 5 ಬಾರಿ ಭೇಟಿ ನೀಡಿದ್ದಾರೆ.