ಹೈದರಾಬಾದ್‌ :  ಇತ್ತೀಚೆಗೆ ಪ್ರತಿಪಕ್ಷಗಳು, ‘ವಿದ್ಯುನ್ಮಾನ ಮತಯಂತ್ರ (ಇವಿಎಂ) ಬೇಡ. ಇವನ್ನು ತಿರುಚಲಾಗುತ್ತಿದೆ. ಹೀಗಾಗಿ ಹಳೆಯ ಮತಪತ್ರ ಪದ್ಧತಿಯೇ ಬೇಕು’ ಎಂದು ಬೇಡಿಕೆ ಇಡುತ್ತಿವೆ. ಇದು ತೆಲಂಗಾಣದ ನಿಜಾಮಾಬಾದ್‌ನಲ್ಲಿ ಸಾಕಾರಗೊಳ್ಳುವ ಸಾಧ್ಯತೆ ಇದೆ!

ಹೌದು. ತೆಲಂಗಾಣ ಮುಖ್ಯಮಂತ್ರಿ ಹಾಗೂ ಟಿಆರ್‌ಎಸ್‌ ಮುಖ್ಯಸ್ಥ ಕೆ. ಚಂದ್ರಶೇಖರರಾವ್‌ ಅವರ ಪುತ್ರಿ ಕಲವಕುಂಟ್ಲ ಕವಿತಾ ಅವರು ಸ್ಪರ್ಧೆ ಮಾಡುತ್ತಿರುವ ನಿಜಾಮಾಬಾದ್‌ ಲೋಕಸಭಾ ಕ್ಷೇತ್ರದ ಮತದಾನಕ್ಕೆ ವಿದ್ಯುನ್ಮಾನ ಮತಯಂತ್ರ(ಇವಿಎಂ)ದ ಬದಲಿಗೆ ಬ್ಯಾಲೆಟ್‌ ಪೇಪರ್‌ ಮೂಲಕ ಚುನಾವಣೆ ನಡೆಸುವ ಸಾಧ್ಯತೆ ದಟ್ಟವಾಗಿದೆ. ಏಕೆಂದರೆ ಇಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಸಂಖ್ಯೆ 185!

ಮತಯಂತ್ರಗಳಲ್ಲಿ ನಮೂದಿಸಲು ಸಾಧ್ಯವಾಗದಷ್ಟುಅಭ್ಯರ್ಥಿಗಳು ಕಣಕ್ಕಿಳಿದಿರುವ ಹಿನ್ನೆಲೆಯಲ್ಲಿ ನಿಜಾಮಾಬಾದ್‌ ಲೋಕಸಭಾ ಕ್ಷೇತ್ರದಲ್ಲಿ 23 ವರ್ಷಗಳ ಹಿಂದಿನ ಮತಪತ್ರ (ಬ್ಯಾಲೆಟ್‌ ಪೇಪರ್‌) ವ್ಯವಸ್ಥೆಯಲ್ಲೇ ಚುನಾವಣೆ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ಚುನಾವಣಾಧಿಕಾರಿ ರಜತ್‌ ಕುಮಾರ್‌ ಅವರು, ‘ಬ್ಯಾಲೆಟ್‌ ಪೇಪರ್‌ ಮೂಲಕ ಚುನಾವಣೆ ನಡೆಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಆದರೆ, ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಅಂತಿಮ ನಿರ್ಧಾರ ಪ್ರಕಟಿಸಲಿದೆ,’ ಎಂದು ತಿಳಿಸಿದರು.

ಇಷ್ಟೊಂದು ಜನ ಸ್ಪರ್ಧೆ ಏಕೆ?

ಕೇಂದ್ರ ಸರ್ಕಾರ ಮತ್ತು ತೆಲಂಗಾಣ ಸರ್ಕಾರದ ರೈತ ವಿರೋಧಿ ನಿಲುವು ಖಂಡಿಸಿ, ತಮ್ಮ ಸಮಸ್ಯೆಗಳ ಬಗ್ಗೆ ರಾಜಕೀಯ ಪಕ್ಷಗಳ ಗಮನ ಸೆಳೆಯಲು 178 ಮಂದಿ ರೈತರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಏ.11ರಂದು ನಡೆಯಲಿರುವ ರಾಜ್ಯದ ಮೊದಲ ಹಂತದ ಚುನಾವಣೆಗೆ 17 ಕ್ಷೇತ್ರಗಳಲ್ಲಿ ಒಟ್ಟಾರೆ 443 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ವಾರಾಣಸಿಯಲ್ಲೂ ಹೀಗೇ ಆಗುತ್ತಾ?

ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸಿರುವ ವಾರಾಣಸಿಯಲ್ಲೂ ತಮಿಳುನಾಡಿನ ಸುಮಾರು 100 ರೈತರು ಸ್ಪರ್ಧಿಸುವ ಎಚ್ಚರಿಕೆ ನೀಡಿದ್ದಾರೆ. ಇದು ನಿಜವಾದರೆ ವಾರಾಣಸಿಯಲ್ಲೂ ಇವಿಎಂ ಬದಲು ಮತಪತ್ರಗಳನ್ನು ಇಡಬೇಕಾಗುತ್ತದೆ.