ಬೆಂಗಳೂರು[ಮೇ.12]: ಲೋಕಸಭೆಗೆ ಮತದಾನ ಮುಗಿದ ಬೆನ್ನಲ್ಲೇ ಅಭ್ಯರ್ಥಿಗಳ ಸೋಲು- ಗೆಲುವು ಬಗ್ಗೆ ಜ್ಯೋತಿಷಿಗಳ ಭವಿಷ್ಯ ವಾಣಿಗಳು ಹೆಚ್ಚಾಗಿ ಕೇಳಿಬರುತ್ತಿವೆ. ಈ ಬಗ್ಗೆ ವಿಚಾರವಾದಿಗಳ ಸಂಘ ಜ್ಯೋತಿಷಿಗಳಿಗೆ ಸವಾಲು ಎಸೆದಿದ್ದು, ಕರಾರುವಾಕ್ಕಾಗಿ ಜ್ಯೋತಿಷ್ಯ ನುಡಿದವರಿಗೆ 1 ಕೋಟಿ ರು. ಬಹುಮಾನ ಘೋಷಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಅಖಿಲ ಕರ್ನಾಟಕ ವಿಚಾರವಾದಿ ಸಂಘದ ಅಧ್ಯಕ್ಷ ಪ್ರೊ.ಎ.ಎಸ್. ನಟರಾಜ್, ದೇಶದ ಯಾವುದೇ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ, ಅವರು ಎಷ್ಟು ಮತ ಗಳಿಸುತ್ತಾರೆ? ಸೋತವರು ಎಷ್ಟು ಮತ ಪಡೆಯುತ್ತಾರೆ ಎಂದು ಕರಾರುವಕ್ಕಾಗಿ ಹೇಳಬೇಕು. ಮೇ 20ರ ಒಳಗೆ ಮುಚ್ಚಿದ ಲಕೋಟೆಯಲ್ಲಿ ಕ್ಷೇತ್ರ ಹಾಗೂ ಭವಿಷ್ಯ ಬರೆದು ನೀಡಬೇಕು. ಜತೆಗೆ ೧ ಲಕ್ಷ ರು. ಭದ್ರತಾ ಠೇವಣಿ ಇಡಬೇಕು. ಕರಾರುವಾಕ್ಕಾಗಿ ಭವಿಷ್ಯ ನುಡಿದರೆ 1 ಲಕ್ಷ ರು. ಜತೆಗೆ 1 ಕೋಟಿ ರು. ಬಹುಮಾನ. ತಪ್ಪಾದರೆ ಠೇವಣಿ ಜಪ್ತಿ ಮಾಡಿಕೊಳ್ಳಲಾಗುವುದು ಎಂದರು.

ಇನ್ನೂ ಮೂವರಿಂದ ಲಕ್ಷ ಲಕ್ಷ:

ಇಷ್ಟಲ್ಲದೇ ವಿಚಾರವಾದಿ ನರೇಂದ್ರ ನಾಯಕ್ ವೈಯಕ್ತಿಕ ವಾಗಿ 10 ಲಕ್ಷ ರು., ಆರ್‌ಟಿಐ ಕಾರ‌್ಯಕರ್ತ ನರಸಿಂಹಮೂರ್ತಿ 1 ಲಕ್ಷ ರು. ಹಾಗೂ ತಮ್ಮ ಬೆರಳಿನಲ್ಲಿರುವ 5 ಗ್ರಾಂ ಚಿನ್ನದ ಉಂಗುರ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ 10 ಸಾವಿರ ರು. ನೀಡುವುದಾಗಿ ಹೇಳಿದ್ದಾರೆ. ಸವಾಲು ಸ್ವೀಕರಿಸುವವರು, ಅಧ್ಯಕ್ಷರು, ನಂ.43, ಅಖಿಲ ಕರ್ನಾಟಕ ವಿಚಾರವಾದಿ ಸಂಘ, ರೋಹಿಣಿ, 5ನೇ ಮುಖ್ಯರಸ್ತೆ, ಪದ್ಮನಾಭನಗರ, ಬೆಂಗಳೂರು-70. ಅಥವಾ ದೂ.ಸಂಖ್ಯೆ 9343743305ಗೆ ಸಂಪರ್ಕಿಸಬಹುದು.