Asianet Suvarna News Asianet Suvarna News

Young scientist Gitanjali Rao: ಅನ್ವೇಷಣೆಯ ಹಾದಿಯಲ್ಲಿ ಸೋಲಿನ ಬಗ್ಗೆ ಭಯ ಬೇಡವೆಂದ ಯುವ ವಿಜ್ಞಾನಿ ಗೀತಾಂಜಲಿ ರಾವ್‌

ಸಂಶೋಧನೆಯಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿಗಳು, ಯುವ ವಿಜ್ಞಾನಿಗಳು ಯಶಸ್ಸಿಗಾಗಿ ಗಮನಿಸುವಿಕೆ, ಚರ್ಚೆ, ಸಂಶೋಧನೆ, ನಿರ್ಮಾಣ ಮತ್ತು ಸಂವಹನ ಮಾರ್ಗ ಅನುಸರಿಸಬೇಕು ಎಂದು ಭಾರತೀಯ ಮೂಲದ ಅಮೆರಿಕ ಯುವ ವಿಜ್ಞಾನಿ ಗೀತಾಂಜಲಿ ರಾವ್‌ ಹೇಳಿದ್ದಾರೆ.

Young scientist Gitanjali Rao in International Day of Women and Girls in Science 2022 gow
Author
Bengaluru, First Published Feb 14, 2022, 12:31 PM IST | Last Updated Feb 14, 2022, 12:31 PM IST

ಚೆನ್ನೈ(ಫೆ.14):ʻಗಮನಿಸುವಿಕೆ, ಚರ್ಚೆ, ಸಂಶೋಧನೆ, ನಿರ್ಮಾಣ ಮತ್ತು ಸಂವಹನʼ - ಈ ಐದು ಅಂಶಗಳು ಯಾವುದೇ ಅನ್ವೇಷಣೆಯಲ್ಲಿ ಪ್ರಮುಖ ಹೆಜ್ಜೆಗಳಾಗಿದ್ದು, ಸಂಶೋಧನೆಯಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿಗಳು, ಯುವ ವಿಜ್ಞಾನಿಗಳು ಯಶಸ್ಸಿಗಾಗಿ ಈ ಮಾರ್ಗ ಅನುಸರಿಸಬೇಕು ಎಂದು ಭಾರತೀಯ ಮೂಲದ ಅಮೆರಿಕ ಯುವ ವಿಜ್ಞಾನಿ ಗೀತಾಂಜಲಿ ರಾವ್‌ ಹೇಳಿದ್ದಾರೆ.

ಚೆನ್ನೈನ ಅಮೆರಿಕ ದೂತಾವಾಸವು ಹೈದರಾಬಾದ್‌, ಕೋಲ್ಕತ್ತಾ ಮತ್ತು ಮುಂಬೈನ ಅಮೆರಿಕ ದೂತವಾಸಗಳ ಜೊತೆ ಶುಕ್ರವಾರ ಆಯೋಜಿಸಿದ್ದ, ʻವಿಜ್ಞಾನ ವಲಯದಲ್ಲಿನ ಮಹಿಳೆ ಮತ್ತು ಬಾಲಕಿಯರ ಅಂತಾರಾಷ್ಟ್ರೀಯ ದಿನಾಚರಣೆʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ʻವಾಟರ್‌ ಗರ್ಲ್‌ ಆಫ್‌ ಇಂಡಿಯಾʼ ಖ್ಯಾತಿಯ ಗರ್ವಿತಾ ಗುಲಾಟಿ ಅವರೊಂದಿಗಿನ ಸಂವಾದದಲ್ಲಿ ಭಾಗವಹಿಸಿದ್ದ ಗೀತಾಂಜಲಿ ರಾವ್‌, ʻಶೈಕ್ಷಣಿಕ ಸಾಧನೆ ಮತ್ತು ಅಂಕಗಳ ಮೇಲಷ್ಟೇ ಗಮನ ಕೇಂದ್ರೀಕರಿಸುವದರ ಬದಲು ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಇತ್ಯಾದಿಗಳ ಬಗ್ಗೆ ಗಮನಹರಿಸಬೇಕು. ಇವು ಭವಿಷ್ಯದ ಮಾರ್ಗಗಳಾಗಿವೆ. ಯಾವುದೇ ಅನ್ವೇಷಣೆಯಾಗಲಿ ಸೋಲು ಹಾಗೂ ವೈಫಲ್ಯಗಳ ಬಗ್ಗೆ ಗಮನ ನೀಡಬಾರದು. ಸೋಲಿನಿಂದ ನಿಮಗೆ ಅನುಭವ ದೊರಕುತ್ತದೆ ಮತ್ತು ಅದೇ ಮುಂದೆ ಯಶಸ್ವಿಗೆ ಕಾರಣವಾಗುತ್ತದೆ. ಸಣ್ಣದೇ ಆಗಲಿ, ದೊಡ್ಡದೇ ಆಗಲಿ ಬದಲಾವಣೆಗೆ ಕಾರಣರಾಗಿʼ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಂವಾದಕ್ಕೂ ಮುನ್ನ ಎಲ್ಲರನ್ನೂ ವೆಬಿನಾರ್‌ಗೆ ಸ್ವಾಗತಿಸಿದ ಚೆನ್ನೈನ ಅಮೆರಿಕ ಕಾನ್ಸಲೇಟ್‌ ಕಚೇರಿಯ ಕಾನ್ಸಲ್‌ ಜನರಲ್‌ ಜ್ಯುಡಿತ್‌ ರೆವಿನ್‌, ಭಾರತೀಯ ಮೂಲದ 4.8 ದಶಲಕ್ಷ ಜನರು ಪ್ರಸ್ತುತ ಅಮೆರಿಕದಲ್ಲಿ ನೆಲೆಸಿದ್ದು, ವಿಜ್ಞಾನ, ಮನರಂಜನೆ, ಬಾಹ್ಯಾಕಾಶ, ಕಲೆ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ. 1790ರಲ್ಲಿ ಚೆನ್ನೈನಿಂದ ಭಾರತೀಯ ವ್ಯಕ್ತಿಯೊಬ್ಬ ಬ್ರಿಟಿಷ್‌ ಹಡಗಿನ ಮೂಲಕ ಅಮೆರಿಕದ ನೆಲಕ್ಕೆ ಕಾಲಿಟ್ಟಿದ್ದು, ಈ ಸಂಬಂಧಕ್ಕೆ ಮುನ್ನುಡಿ ಬರೆಯಿತು ಎಂದರು. ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಹಾಗೂ ಕರ್ನಾಟಕ ಮೂಲದ ಸರ್ಜನ್‌ ಜನರಲ್‌ ವಿವೇಕ ಮೂರ್ತಿ ಅವರ ಕೊಡುಗೆಯನ್ನು ಸಹ ಈ ಸಂದರ್ಭದಲ್ಲಿ ಸ್ಮರಿಸಿದರು.

2 ಲಕ್ಷ ಭಾರತೀಯ ವಿದ್ಯಾರ್ಥಿಗಳು ಪ್ರಸ್ತುತ ಅಮೆರಿಕದಲ್ಲಿ ಕಲಿಯುತ್ತಿದ್ದಾರೆ. ಅವರಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜನಿಯರಿಂಗ್‌ ಮತ್ತು ಗಣಿತ (ಸ್ಟೆಮ್‌) ಕ್ಷೇತ್ರಗಳನ್ನು ಆಯ್ದುಕೊಂಡವರೇ ಹೆಚ್ಚು. ಈ ವಿದ್ಯಾಥಿಗಳು ತಮ್ಮ ವಿಶಿಷ್ಟ ಸಂಶೋಧನೆ ಹಾಗೂ ಅನ್ವೇಷಣೆಗಳ ಮೂಲಕ ಅಮೆರಿಕದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಕಾರಣರಾಗಿದ್ದಾರೆ ಎಂದೂ ಜ್ಯುಡಿತ್‌ ರೆವಿನ್‌ ಮೆಚ್ಚುಗೆ ವ್ಯಕ್ತಪಡಿಸಿದರು. ಚೆನ್ನೈ ದೂತಾವಾಸದ ಸಾರ್ವಜನಿಕ ವ್ಯವಹಾರಗಳ ಅಧಿಕಾರಿ ಆನ್‌ ಲೀ ಶೇಷಾದ್ರಿ ವಂದನಾರ್ಪಣೆ ಮಾಡಿದರು.

ಅಮೆರಿಕದ ಯಶಸ್ಸಿನಲ್ಲಿ ಭಾರತೀಯ ಅಮೆರಿನ್ನರ ಕೊಡುಗೆ ಮಹತ್ತರವಾಗಿದ್ದು, ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯು ʻಡಯಸ್ಪೊರಾ ಡಿಪ್ಲೊಮಸಿʼ ಸರಣಿಯ ಮೂಲಕ ವಿಜ್ಞಾನ, ತಂತ್ರಜ್ಞಾನ, ಕಲೆ, ರಾಜಕೀಯ, ವ್ಯವಹಾರ, ಬಾಹ್ಯಾಕಾಶ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಕೊಡುಗೆ ನೀಡುತ್ತಿರುವ ಭಾರತೀಯ ಮೂಲದ ಅಮೆರಿಕ ಸಾಧಕರ ಜೊತೆ ಮಾತುಕತೆ, ಸಂದರ್ಶನ ಇತ್ಯಾದಿಗಳನ್ನು ಕಾಲಕಾಲಕ್ಕೆ  ಏರ್ಪಡಿಸಲಿದೆ.

ಭಾರತ ಮೂಲದ ಗೀತಾಂಜಲಿ ರಾವ್‌ ಕೊಲರೆಡೊದಲ್ಲಿ ಯುವ ವಿಜ್ಞಾನಿಯಾಗಿದ್ದು, ಬರಹಗಾತಿ, ಭಾಷಣಕಾರ್ತಿ ಹಾಗೂ ಜಗತ್ತಿನಾದ್ಯಂತ ʻಸ್ಟೆಮ್‌ʼ (ಸೈನ್ಸ್‌, ಟೆಕ್ನಾಲಜಿ, ಎಂಜನೀಯರಿಂಗ್‌, ಮ್ಯಾಥ್ಸ್‌) ಶಿಕ್ಷಣ ವ್ಯವಸ್ಥೆಯ ಪ್ರತಿಪಾದಕಿಯಾಗಿದ್ದಾರೆ. ಅಲ್ಲದೇ ನೀರಿನಲ್ಲಿ ಸೀಸದ ಮಾಲಿನ್ಯ ಕಂಡುಹಿಡಿಯಲು ಅಭಿವೃದ್ಧಿಪಡಿಸಿದ ಸಾಧನಕ್ಕಾಗಿ ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆಯ ಪ್ರತಿಷ್ಠಿತ ಯುವ ವಿಜ್ಞಾನಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೃತಕ ಬುದ್ಧಿಮತ್ತೆ ಮತ್ತು ಭಾಷಾ ಸಂಸ್ಕರಣೆಯ ನೆರವಿನಿಂದ ಸೈಬರ್‌ ಪೀಡನೆಯನ್ನು ತಡೆಯಲು ಅವರು ಸಿದ್ಧಪಡಿಸಿದ ಹೊಸ ಮಾದರಿಯ ಸೇವೆ ಸಹ ಪ್ರಶಂಸೆಗೆ ಪಾತ್ರವಾಗಿದೆ. ಗೀತಾಂಜಲಿ ಅವರು ಬರೆದ ʻಯಂಗ್‌ ಇನೊವೇಟರ್ಸ್‌ ಗೈಡ್‌ ಟು ಸ್ಟೆಮ್‌ʼ ಪುಸ್ತಕ ಸಂಶೋಧನಾ ಪ್ರಕ್ರಿಯೆಯಲ್ಲಿ ವಿದ್ಯಾಥಿಗಳು ಮತ್ತು ಶಿಕ್ಷಕರಿಗೆ ನೆರವಾಗುತ್ತಿದೆ.

ಗರ್ವಿತಾ ಗುಲಾಟಿ ʻವೈ ವೇಸ್ಟ್‌ʼ ಎಂಬ ಸರ್ಕಾರೇತರ ಸಂಸ್ಥೆಯ ಸಂಸ್ಥಾಪಕಿಯಾಗಿದ್ದು ʻವಾಟರ್‌ ಗರ್ಲ್‌ ಆಫ್‌ ಇಂಡಿಯಾʼ ಎಂಬ ಖ್ಯಾತಿ ಗಳಿಸಿದ್ದಾರೆ. ಗರ್ವಿತಾ ಮತ್ತು ಅವರ ಜಲ ಉದ್ಯಮಿಗಳ ತಂಡ ʻಗ್ಲಾಸ್‌ ಹಾಫ್‌ ಫುಲ್‌ʼ ಎಂಬ ಅಭಿಯಾನದ ಮೂಲಕ ಭಾರತದ ಹೋಟೆಲ್‌ಗಳಲ್ಲಿ ವ್ಯರ್ಥವಾಗುತ್ತಿದ್ದ ಸುಮಾರು 10 ದಶಲಕ್ಷ ಲೀಟರ್‌ ನೀರನ್ನು ಉಳಿಸಿದ್ದಾರೆ.

Latest Videos
Follow Us:
Download App:
  • android
  • ios