Asianet Suvarna News Asianet Suvarna News

ಯುಜಿಸಿಇಟಿ-2024: ಅಭ್ಯರ್ಥಿಗಳ ದಾಖಲೆಗಳ ಆಫ್ ಲೈನ್ ಪರಿಶೀಲನೆ ಜೂ.25ರಿಂದ ಆರಂಭ

ಯುಜಿಸಿಇಟಿ-2024ರ ಆನ್‌ಲೈನ್ ಅರ್ಜಿಯಲ್ಲಿ ಅರ್ಹತಾ ಕಂಡಿಕೆಗಳನ್ನು ಕ್ಲೇಮ್ ಮಾಡಿರುವ ಹಾಗೂ ರ್ಯಾಂಕ್ ಪಡೆದಿರುವ ಅಭ್ಯರ್ಥಿಗಳಿಗೆ ಜೂ.25ರಿಂದ ಆಫ್ ಲೈನ್ ದಾಖಲಾತಿ ಪರಿಶೀಲನೆ ಆರಂಭವಾಗಲಿದೆ.

UGCET 2024 candidates Off line documents verification will start from June 25 sat
Author
First Published Jun 23, 2024, 1:20 PM IST | Last Updated Jun 23, 2024, 1:20 PM IST

ವರದಿ- ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಜೂ.23): 
ಯುಜಿಸಿಇಟಿ-2024ರ ಆನ್‌ಲೈನ್ ಅರ್ಜಿಯಲ್ಲಿ ಅರ್ಹತಾ ಕಂಡಿಕೆಗಳಾದ ಬಿ.ಸಿ.ಡಿ. ಐ.ಜೆ.ಕೆ.ಎಲ್.ಎಂ.ಎನ್ ಹಾಗೂ ಜೆಡ್- ಈ ಕ್ಲಾಸ್ ಗಳನ್ನು ಕ್ಲೇಮ್ ಮಾಡಿರುವ ಹಾಗೂ ರ್ಯಾಂಕ್ ಪಡೆದಿರುವ ಅಭ್ಯರ್ಥಿಗಳಿಗೆ ಆಫ್ ಲೈನ್ ದಾಖಲಾತಿ ಪರಿಶೀಲನೆಯು ಜೂನ್ 25ರಿಂದ 29 ರವರೆಗೆ ಇಲ್ಲಿನ ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ನಡೆಯಲಿದೆ.

ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ಅವರು ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದು, ಸಂಬಂಧಿಸಿದ ಅಭ್ಯರ್ಥಿಗಳಿಗೆ ಖುದ್ದು ಹಾಜರಾಗಲು ಸೂಚಿಸಿದ್ದಾರೆ. 'ವೈ' ಅರ್ಹತಾ ಕಂಡಿಕೆಯನ್ನು ಕ್ಲೇಮ್ ಮಾಡಿರುವ ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆಗೆ ಹಾಜರಾಗುವ ಅಗತ್ಯವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಯೋಗ & ನ್ಯಾಚುರೋಪತಿ, ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ, ಕೃಷಿ ವಿಜ್ಞಾನ ಕೋರ್ಸುಗಳು, [ಬಿ.ಎಸ್ಸಿ (ಆನರ್ಸ್) ಕೃಷಿ, ಬಿ.ಎಸ್ಸಿ (ಆನರ್ಸ್) (ರೇಷ್ಮೆ ಕೃಷಿ) ಮುಂತಾದವು], ಬಿ.ಎಸ್ಸಿ (ನರ್ಸಿಂಗ್), ಬಿ.ಫಾರ್ಮಾ, 2ನೇ ವರ್ಷದ ಬಿ-ಫಾರ್ಮಾ ಮತ್ತು ಫಾರ್ಮಾ-ಡಿ ಕೋರ್ಸುಗಳ ಪ್ರವೇಶಕ್ಕೆ ಇದು ಅನ್ವಯವಾಗುತ್ತದೆ.

ಕರ್ನಾಟಕ ಯುಜಿಸಿಇಟಿ 2024 ಫಲಿತಾಂಶ ಪ್ರಕಟ; ಹರ್ಷ ಕಾರ್ತಿಕೇಯ ಮೊದಲ ರ್ಯಾಂಕ್

ವಿದ್ಯಾರ್ಥಿಗಳ ರ್ಯಾಂಕ್ ಆಧರಿಸಿ ಅವರು ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾದ ವೇಳಾಪಟ್ಟಿಯನ್ನು ಕೆಇಎ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದೆ.  ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲೆಗಳ ವಿವರಗಳನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿರುವ ಇ-ಮಾಹಿತಿ ಪುಸ್ತಕದಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ತಮ್ಮ ಅರ್ಹತಾ ಕಂಡಿಕೆಗೆ ಅನುಸಾರವಾಗಿ ಅವಶ್ಯವಿರುವ ಎಲ್ಲಾ ಮೂಲ ದಾಖಲೆಗಳೊಂದಿಗೆ ಹಾಗೂ ಒಂದು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ  ಹಾಜರಾಗಬೇಕೆಂದು ತಿಳಿಸಲಾಗಿದೆ.

ಅರ್ಹತಾ ಕಂಡಿಕೆ 'ಎ', 'ಇ', 'ಎಫ್', 'ಜಿ', 'ಹೆಚ್' ಹಾಗೂ 'ಓ' ಆಪ್ಶನ್ ಕ್ಲೇಮ್ ಮಾಡಿರುವ ಅಭ್ಯರ್ಥಿಗಳಿಗೆ ಯುಜಿಸಿಇಟಿ-2024ರ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ದಾಖಲಾತಿ ಪರಿಶೀಲನೆಯನ್ನು ಆನ್‌ಲೈನ್ ಮೂಲಕ ನಡೆಸಲಾಗುತ್ತಿದೆ. ಈ ಬಗ್ಗೆ ವಿವರ ಮಾಹಿತಿ ಮತ್ತು ಅಭ್ಯರ್ಥಿಗಳು ಅನುಸರಿಸಬೇಕಾದ ಸೂಚನೆಗಳನ್ನು ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದು ಪ್ರಸನ್ನ ಅವರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios